ಗದಗ ಜಿಲ್ಲೆಯ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆ ಪೂಜಾ ಅಮರೇಶ ಅಯ್ಯನಗೌಡರ್ (27). ಪೂಜಾ ತಮ್ಮ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೂಜಾ ಅವರ ಕುಟುಂಬಸ್ಥರ ಆರೋಪದ ಪ್ರಕಾರ, ಆಕೆಯ ಅತ್ತೆ ಶಶಿಕಲಾ, ಬಾವ ವೀರನಗೌಡ ಮತ್ತು ಮಾವ ನಿತ್ಯ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಪೂಜಾ ಸ್ವಲ್ಪ ಕಪ್ಪು ಬಣ್ಣದವರಾಗಿದ್ದರಿಂದ ಅತ್ತೆ ಆಕೆಯನ್ನು ಅಪಹಾಸ್ಯ ಮಾಡುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಪೂಜಾ ಕೇವಲ ನಾಲ್ಕು ತಿಂಗಳ ಹಿಂದೆ ಅಮರೇಶ ಎಂಬುವರನ್ನು ವಿವಾಹವಾಗಿದ್ದರು. ಆಕೆಯ ಪತಿ ಅಮರೇಶ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರವಷ್ಟೇ ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದರು.
ಘಟನೆಯ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
			





 
                             
                             
                             
                             
                            