‘ದಪ್ಪಗಿದ್ದೀಯಾ, ಮಗು ಆಗಲ್ಲ’ ಎಂದು ಟಾರ್ಚರ್..! ಗಂಡನ ಕಿರುಕುಳಕ್ಕೆ ಪತ್ನಿ ಸೂಸೈಡ್‌..!

BeFunky collage

ಪ್ರೀತಿಸಿ, ಪೋಷಕರ ವಿರೋಧದ ನಡುವೆಯೂ ಸಪ್ತಪದಿ ತುಳಿದಿದ್ದ ಮಹಿಳೆಯೊಬ್ಬಳು ಪತಿಯ ಕ್ರೂರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಕರುಣಾಜನಕ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಪತಿಯ ನಿರಂತರ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ತಾಳಲಾರದೆ ಶಿವಲೀಲಾ ಎಂಬಾಕೆ ಜೀವನ ಕೊನೆಗಾಣಿಸಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ:

ಮೃತ ಶಿವಲೀಲಾ ಹಾಗೂ ಆರೋಪಿ ಲಕ್ಷ್ಮಣ್ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಇವರಿಬ್ಬರ ಪ್ರೀತಿಯನ್ನು ಪೋಷಕರು ವಿರೋಧಿಸಿದ್ದರು. ಆದಾಗ್ಯೂ, ಪೋಷಕರ ವಿರೋಧದ ನಡುವೆಯೂ ಈ ಜೋಡಿ ಪ್ರೇಮ ವಿವಾಹವಾಗಿತ್ತು. ತಾನು ಪ್ರೀತಿಸಿದವನೊಂದಿಗೆ ಸುಖವಾಗಿ ಬಾಳಬೇಕೆಂಬ ಶಿವಲೀಲಾ ಕನಸು ಕೆಲವೇ ದಿನಗಳಲ್ಲಿ ನುಚ್ಚುನೂರಾಯಿತು.

‘ದಪ್ಪಗಿದ್ದೀಯಾ, ಮಗುವಾಗಲ್ಲ’ ಎಂದು ನಿತ್ಯ ಟಾರ್ಚರ್:

ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ಲಕ್ಷ್ಮಣ್, ದಿನ ಕಳೆದಂತೆ ತನ್ನ ಅಸಲಿ ರೂಪವನ್ನು ತೋರಿಸಲು ಆರಂಭಿಸಿದ್ದ. ಮದುವೆಯಾದ ಮೇಲೆ ಶಿವಲೀಲಾ ಸ್ವಲ್ಪ ದಪ್ಪಗಾಗಿದ್ದರು ಎನ್ನುವ ಕಾರಣಕ್ಕೆ “ನೀನು ತುಂಬಾ ದಪ್ಪಗಿದ್ದೀಯಾ, ನಿನಗೆ ಮಕ್ಕಳು ಆಗಲ್ಲ” ಎಂದು ನಿತ್ಯ ಚುಚ್ಚುಮಾತುಗಳಿಂದ ಕಿರುಕುಳ ನೀಡಲು ಆರಂಭಿಸಿದ್ದ. ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಲಕ್ಷ್ಮಣ್, ಶಿವಲೀಲಾಗೆ ತೀವ್ರವಾಗಿ ಮಾನಸಿಕ ಹಾಗೂ ದೈಹಿಕ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ.

ವರದಕ್ಷಿಣೆಗಾಗಿ ಕೊಲೆ :

ಮದುವೆಯಾಗಿ 4 ವರ್ಷ ಕಳೆದರೂ ಪತ್ನಿಯ ಮೇಲಿನ ದೌರ್ಜನ್ಯ ನಿಂತಿರಲಿಲ್ಲ. ಇದರ ಜೊತೆಗೆ ಪೋಷಕರ ಮನೆಯಿಂದ ವರದಕ್ಷಿಣೆ ತರುವಂತೆ ಶಿವಲೀಲಾಳನ್ನು ಲಕ್ಷ್ಮಣ್ ಪೀಡಿಸುತ್ತಿದ್ದ ಎನ್ನಲಾಗಿದೆ. ಕೊನೆಗೆ ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನ ಕಿರುಕುಳವನ್ನು ಸಹಿಸಲಾರದೆ ಶಿವಲೀಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಶಿವಲೀಲಾ ಪೋಷಕರು ಪತಿ ಲಕ್ಷ್ಮಣ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಕೇವಲ ಆತ್ಮಹತ್ಯೆಯಲ್ಲ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Exit mobile version