ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಆಟೋದಲ್ಲಿದ್ದ ಆರು ಜನರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಶ್ರೀನಿವಾಸ್ ಮತ್ತು ಪುಟ್ಟಮ್ಮ ಎಂದು ಗುರುತಿಸಲಾಗಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಮಲ್ಲರಬಾಣವಾಡಿ ಕ್ರಾಸ್ ಬಳಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಆಟೋ ಸಂಪೂರ್ಣ ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಯಿತು. ಆಟೋ ಚಾಲಕ ಶ್ರೀನಿವಾಸ್ ಮತ್ತು ಪುಟ್ಟಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳಾದ ರತ್ನಮ್ಮ ಅವರನ್ನು ತಲೆಗೆ ಗಂಭೀರ ಗಾಯವಾದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ, ಜೊತೆಗೆ ಮಕ್ಕಳಾದ ವರ್ಷ ಮತ್ತು ಲೇಖನ, ವೆಂಕಟೇಶ ಎಂಬುವವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಾದ ಶ್ರೀನಿವಾಸ್ ಮತ್ತು ಪುಟ್ಟಮ್ಮ, ಶಿವಗಂಗೆ ಸಮೀಪದ ಮೈಲನಹಳ್ಳಿಯ ನಿವಾಸಿಗಳಾಗಿದ್ದು, ಎರಡು ದಿನಗಳ ಹಿಂದೆ ಶುಭ ಕಾರ್ಯಕ್ರಮವೊಂದಕ್ಕಾಗಿ ಆಗಮಿಸಿದ್ದರು. ಘಟನೆಯ ಬಳಿಕ ನೆಲಮಂಗಲ ಸಂಚಾರಿ ಪೊಲೀಸರು ಮತ್ತು ಟೋಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಿ, ಕ್ರೇನ್ ಮೂಲಕ ಆಟೋ ಮತ್ತು ಬಸ್‌ನ್ನು ತೆರವುಗೊಳಿಸಿ ಟ್ರಾಫಿಕ್ ನಿಯಂತ್ರಿಸಲಾಯಿತು.
ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೂ, ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
| Reported by: ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ





