ಬೆಂಗಳೂರಲ್ಲಿ ಮತ್ತೆ ಭಾರಿ ಡ್ರಗ್ಸ್ ಭೇಟೆ

ಮಹಾರಾಷ್ಟ್ರ ANTF ಬಳಿಕ NCB ಆಪರೇಷನ್

BeFunky collage (72)

ಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಡ್ರಗ್ಸ್ ಸಂಬಂಧಿತ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಹೊಸ ವರ್ಷಕ್ಕೂ ಮುನ್ನ ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಾಧಿಸಿದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ). ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 8 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಳ್ಳಸಾಗಣೆ ಜಾಲವನ್ನು ಭೇದಿಸಲಾಗಿದೆ.

ಕಳೆದ ವಾರ ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಮೂಲದ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 56 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿದ್ದರು. ಇದಕ್ಕೂ ಮುನ್ನ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿತ್ತು. ಈಗ ಎನ್‌ಸಿಬಿ ಬೆಂಗಳೂರು ಘಟಕದ ಅಧಿಕಾರಿಗಳು ಈ ಭಾರಿ ವಶಪಡಿಸಿಕೊಂಡಿರುವುದು NDPS ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತುವೆಂದು ಸೇರ್ಪಡೆಗೊಳಿಸಿದ 2018ರ ನಂತರ ಕರ್ನಾಟಕದಲ್ಲಿ ಅತಿ ದೊಡ್ಡ ಪ್ರಮಾಣದ ವಶ ಎಂದು ತಿಳಿಸಿದೆ.

ಖಾಟ್ ಎಲೆ ಎಂದರೇನು?

ಖಾಟ್ ಒಂದು ಹೂಬಿಡುವ ಪೊದೆ ರೀತಿಯ ಸಸ್ಯವಾಗಿದ್ದು, ಇದರ ಎಲೆಗಳಲ್ಲಿ ಮಾದಕತೆ ಉಂಟುಮಾಡುವ ಅಂಶಗಳಿವೆ. ತಂಬಾಕು ಎಲೆಗಳಂತೆ ಜಗಿದು ಬಳಸಲಾಗುತ್ತದೆ. ಭಾರತದಲ್ಲಿ ಇದರ ಬಳಕೆ ಇನ್ನೂ ಹೆಚ್ಚು ಪ್ರಚಾರದಲ್ಲಿಲ್ಲ, ಆದರೆ ಆಫ್ರಿಕಾ (ಇಥಿಯೋಪಿಯಾ) ಮತ್ತು ಕೀನ್ಯಾ ಮೂಲಕ ಅಂತಾರಾಷ್ಟ್ರೀಯ ಮಾರ್ಗದಿಂದ ಕಳ್ಳಸಾಗಣೆಯಾಗಿ ಭಾರತಕ್ಕೆ ಬರುತ್ತಿತ್ತು. ಇದನ್ನು ಭಾರತವನ್ನು ಟ್ರಾನ್ಸಿಟ್ ಪಾಯಿಂಟ್ ಆಗಿ ಬಳಸಿಕೊಂಡು ಉತ್ತರ ಅಮೆರಿಕಾ, ಯುರೋಪ್, ಗಲ್ಫ್ ದೇಶಗಳು ಮತ್ತು ಮಧ್ಯಪ್ರಾಚ್ಯಕ್ಕೆ ರವಾನಿಸಲಾಗುತ್ತಿತ್ತು.

ಆರಂಭಿಕ ತನಿಖೆಯಿಂದ ಬಯಲಾದಂತೆ, ಈ ಸಂಘಟಿತ ಜಾಲ ಇಥಿಯೋಪಿಯಾ, ಕೀನ್ಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿತವಾಗಿತ್ತು. ಈ ಗುಂಪು ಈಗಾಗಲೇ 550ಕ್ಕೂ ಹೆಚ್ಚು ಪಾರ್ಸೆಲ್‌ಗಳಲ್ಲಿ 2,100 ಕೆಜಿ ಖಾಟ್ ಎಲೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿತ್ತು. ಅಂತಾರಾಷ್ಟ್ರೀಯ ಅಂಚೆ ಮತ್ತು ಕೊರಿಯರ್ ವ್ಯವಸ್ಥೆಯನ್ನು ಬಳಸಿಕೊಂಡು ಚಹಾ ಪೊಟ್ಟಣಗಳಂತೆ ಮಾರುಹೊಂದಿಸಿ ಸಾಗಾಣೆ ಮಾಡಲಾಗುತ್ತಿತ್ತು.

ಬೆಂಗಳೂರನ್ನು ಸಂಗ್ರಹಣೆ ಮತ್ತು ವಿತರಣಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಈ ಜಾಲದಲ್ಲಿ ವಿದೇಶಿ ಪ್ರಜೆಗಳು ಪ್ರಮುಖ ಪಾತ್ರ ವಹಿಸಿದ್ದರು. ಸ್ಥಳೀಯ ಸಹಕಾರಿಗಳು ಮತ್ತು ವಿದ್ಯಾರ್ಥಿ/ವೈದ್ಯಕೀಯ ವೀಸಾ ಸೋಗಿನಲ್ಲಿ ಭಾರತದಲ್ಲಿ ವಾಸಿಸುವ ಸದಸ್ಯರು ತೊಡಗಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ಮುಂದುವರಿದಿದ್ದು, ಜಾಲದ ಇತರ ಸಂಪರ್ಕಗಳು ಮತ್ತು ಹಣಕಾಸು ಮಾರ್ಗಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.

Exit mobile version