ನಮ್ಮ ಮೆಟ್ರೋದ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗದ ಯೋಜನಾ ವೆಚ್ಚವನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 28,405 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಾಪಸ್ ಕಳುಹಿಸಿದೆ. ಈ ಕಾರಣದಿಂದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಸ್ವತಂತ್ರ ತಜ್ಞರ ಮೂಲಕ ವೆಚ್ಚದ ಮೌಲ್ಯಮಾಪನಕ್ಕೆ ಮುಂದಾಗಿದ್ದು, ಈ ಮಾರ್ಗದ ನಿರ್ಮಾಣ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಹೆಬ್ಬಾಳದಿಂದ ಸರ್ಜಾಪುರದವರೆಗಿನ ಕೆಂಪು ಮಾರ್ಗವು 36.59 ಕಿ.ಮೀ. ಉದ್ದವಿದ್ದು, ಒಟ್ಟು 28 ನಿಲ್ದಾಣಗಳನ್ನು ಒಳಗೊಂಡಿದೆ. ಈ ಯೋಜನೆಯ ಅಂದಾಜು ವೆಚ್ಚವು 28,405 ಕೋಟಿ ರೂ. ಆಗಿದ್ದು, ಪ್ರತಿ ಕಿಲೋಮೀಟರ್‌ಗೆ ಸುಮಾರು 776.3 ಕೋಟಿ ರೂ. ವೆಚ್ಚವಾಗಲಿದೆ. ಇದರ ಜೊತೆಗೆ, ಖಾಸಗಿ ಭೂಮಿ ಸ್ವಾಧೀನಕ್ಕಾಗಿ 1,224 ಕೋಟಿ ರೂ. ಮತ್ತು ಒಟ್ಟಾರೆ ಸ್ವಾಧೀನ ವೆಚ್ಚಕ್ಕೆ 8,080 ಕೋಟಿ ರೂ. ಅಂದಾಜಿಸಲಾಗಿದೆ. ರಾಜ್ಯ ಸಚಿವ ಸಂಪುಟವು 2024ರ ಡಿಸೆಂಬರ್‌ನಲ್ಲಿ ಈ ಡಿಪಿಆರ್‌ಗೆ ಅನುಮೋದನೆ ನೀಡಿತ್ತು, ಆದರೆ ಕೇಂದ್ರ ಸರ್ಕಾರದಿಂದ ವೆಚ್ಚದ ಮರುಪರಿಶೀಲನೆಗೆ ಸೂಚನೆ ಬಂದಿದೆ.
ನಮ್ಮ ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಶೇ.50 ಈಕ್ವಿಟಿ ಹೊಂದಿರುವುದರಿಂದ, ವೆಚ್ಚದ ದೊಡ್ಡ ಮೊತ್ತವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯವನ್ನು ಸ್ವತಂತ್ರ ಸಲಹೆಗಾರರ ಮೂಲಕ ಮರು ಮೌಲ್ಯಮಾಪನ ನಡೆಸಲು ಕೇಳಿಕೊಂಡಿದೆ. BMRCL ಈಗ ಬಾಹ್ಯ ತಜ್ಞರೊಂದಿಗೆ ವೆಚ್ಚವನ್ನು ಮರುಪರಿಶೀಲಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯಿಂದಾಗಿ ಯೋಜನೆಯ ಕಾಮಗಾರಿ ಆರಂಭವು 2026ರವರೆಗೂ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೆಂಪು ಮಾರ್ಗದ 28 ನಿಲ್ದಾಣಗಳು
ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗವು ಬೆಂಗಳೂರಿನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದ್ದು, ಒಟ್ಟು 28 ನಿಲ್ದಾಣಗಳನ್ನು ಒಳಗೊಂಡಿದೆ:
ಸೋಮಪುರ, ಸರ್ಜಾಪುರ, ಮುತ್ತಾನಲ್ಲೂರು ಕ್ರಾಸ್, ದೊಮ್ಮಸಂದ್ರ,ಕೊಡತಿ ಗೇಟ್,ಸೂಲಿಕುಂಟೆ,ಕಾರ್ಮೆಲರಾಂ
,ಅಂಬೇಡ್ಕರ್‌ನಗರ,ಕೈಕೊಂಡ್ರಹಳ್ಳಿ,ದೊಡ್ಡಕನ್ನಳ್ಳಿ,ಇಬ್ಬಲೂರು,ಬೆಳ್ಳಂದೂರು ಗೇಟ್,ಜಕ್ಕಸಂದ್ರ,ಅಗರ,ಸೇಂಟ್ ಜಾನ್ಸ್ ಆಸ್ಪತ್ರೆ, ಸಿಪಿಡಬ್ಲ್ಯುಡಿ ಕ್ವಾರ್ಟರ್ಸ್, ಡೇರಿ ಸರ್ಕಲ್,ಸುದ್ದಗುಂಟೆಪಾಳ್ಯ,ವಿಲ್ಸನ್ ಗಾರ್ಡನ್
ನಿಮ್ಹಾನ್ಸ್,ಕೆ.ಆರ್. ಸರ್ಕಲ್,ಟೌನ್ ಹಾಲ್,ಪ್ಯಾಲೇಸ್ ಗುಟ್ಟಹಳ್ಳಿ,ಚಾಲುಕ್ಯ ಸರ್ಕಲ್,ವೆಟರ್ನರಿ ಕಾಲೇಜ್,ಮೇಖ್ರಿ ಸರ್ಕಲ್,ಗಂಗಾನಗರ,ಹೆಬ್ಬಾಳ
ಕೆಂಪು ಮಾರ್ಗವು ಬೆಂಗಳೂರಿನ ದಟ್ಟಣೆಯ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ನಿರೀಕ್ಷಿತವಾಗಿತ್ತು, ಆದರೆ ವೆಚ್ಚದ ಮರುಪರಿಶೀಲನೆಯಿಂದ ಈ ಯೋಜನೆಯ ಆರಂಭವು ಮತ್ತಷ್ಟು ವಿಳಂಬವಾಗುವ ಆತಂಕವಿದೆ. BMRCL ಅಧಿಕಾರಿಗಳ ಪ್ರಕಾರ, ಕೇಂದ್ರದ ಸೂಚನೆಯಂತೆ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ಮೆಟ್ರೋ ಸೌಲಭ್ಯ ತಡವಾಗುವ ಸಾಧ್ಯತೆ ಹೆಚ್ಚಿದೆ.