ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೋಣನೂರು–ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಭೀಕರ ಬೆಂಕಿ ಉಂಟಾಗಿದೆ. ಅರಣ್ಯದ ಒಣಗಿದ ಹುಲ್ಲು, ಪೊದೆಗಳು ಮತ್ತು ಮರಗಳು ಧಗಧಗಿಸಿ ಊರಿರುವುದರಿಂದ ಪ್ರದೇಶದಲ್ಲಿ ದಟ್ಟ ಹೊಗೆಯ ಮೋಡ ಕವಿದಿದೆ.
ಸ್ಥಳೀಯರ ಪ್ರಕಾರ ಈ ಬೆಂಕಿ ಸ್ವಾಭಾವಿಕವಾಗಿ ಉಂಟಾಗಿಲ್ಲ. ಕಿಡಿಗೇಡಿಗಳು ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯನ್ನು ಅರಣ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇದೇ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹಲವು ಕಡೆ ಕಂಡುಬಂದಿರುವುದರಿಂದ ತನಿಖೆಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆಯ ರಕ್ಷಣಾ ಕಾರ್ಯಾಚರಣೆ ಬೆಂಕಿ ಕಂಡ ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ವಾಹನಗಳು, ಅರಣ್ಯ ಸಿಬ್ಬಂದಿ,ಸ್ಥಳೀಯ ಗ್ರಾಮಸ್ಥರು ಒಟ್ಟಾಗಿ ಸೇರಿ ಬೆಂಕಿಯ ನಿಯಂತ್ರಣಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ. ರಾತ್ರಿಯ ವೇಳೆಯಲ್ಲೂ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಕಿ ಹರಡುವುದನ್ನು ತಡೆಗಟ್ಟಲು ತೀವ್ರ ಪ್ರಯತ್ನ ನಡೆಯುತ್ತಿದೆ.
ಬೆಂಕಿಯಿಂದಾಗಿ ಅರಣ್ಯದಲ್ಲಿ ವಾಸಿಸುತ್ತಿದ್ದ ಕಾಡು ಪ್ರಾಣಿಗಳು ಚದುರಿಹೋಗಿವೆ. ಹಲವು ಚಿಕ್ಕ ಪ್ರಾಣಿಗಳು ಬೆಂಕಿಗೆ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆಯೂ ಇದೆ. ಇದಲ್ಲದೇ ಈ ಪ್ರದೇಶದ ಜೈವಿಕ ವೈವಿಧ್ಯಕ್ಕೆ ದೊಡ್ಡ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.
ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಸಹಕಾರ ಕೋರಿದ್ದು, ಯಾವುದೇ ಶಂಕಾಸ್ಪದ ಚಟುವಟಿಕೆ ಕಂಡರೆ ತಕ್ಷಣವೇ ಸ್ಥಳೀಯ ಅರಣ್ಯ ಠಾಣೆ ಅಥವಾ ಹೆಲ್ಪ್‌ಲೈನ್‌ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.




