ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೇಸಿಗೆ ರಜೆಗಾಗಿ ತನ್ನ ಊರಿಗೆ ತೆರಳಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 31 ವರ್ಷದ ಯುವಕನನ್ನು ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಂಗಳೂರಿನಲ್ಲಿ ಬಾಲಕಿಯ ಅಮ್ಮನ ಸ್ನೇಹಿತೆಯ ಮನೆಯಲ್ಲಿ ನಡೆದಿದ್ದು, ಆರೋಪಿ ಬಾಲಕಿಯ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಬಳಸಿಕೊಂಡು ಆಕೆಯನ್ನು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ, ಧನಂಜಯ ಬಾಲಕಿಯನ್ನು ಬೆದರಿಸಿ ಬೆಂಗಳೂರಿಗೆ ಬಂದು ಬಾಲಕಿಯನ್ನ ಕರೆದುಕೊಂಡು ಹೋಗಿದ್ದ. ಆನಂತರ, ಸಕಲೇಶಪುರದ ಒಂದು ತೋಟದಲ್ಲಿ ಆಕೆಯನ್ನು ಬಚ್ಚಿಟ್ಟು, ನಿರಂತರವಾಗಿ ಅತ್ಯಾಚಾರವನ್ನು ಮುಂದುವರೆಸಿದ್ದಾನೆ ಎಂದು ತಿಳಿದುಬಂದಿದೆ.ಈ ದುಷ್ಕೃತ್ಯದಿಂದ ಬಾಲಕಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಬಾಲಕಿಯು ತನ್ನ ದುಃಸ್ಥಿತಿಯನ್ನು ಪೋಷಕರಿಗೆ ತಿಳಿಸಿದ ನಂತರ, ಅವರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ವೈದ್ಯಕೀಯ ತಪಾಸಣೆಯಿಂದ ಅತ್ಯಾಚಾರದ ಆರೋಪ ದೃಢಪಟ್ಟಿದ್ದು, ಸೋಲದೇವನಹಳ್ಳಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಧನಂಜಯನನ್ನು ಬಂಧಿಸಿದರು. ಪ್ರಕರಣವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (POCSO Act) ಅಡಿಯಲ್ಲಿ ದಾಖಲಿಸಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಪೊಲೀಸರು ಆರೋಪಿಯ ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದು, ಬಾಲಕಿಯ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ದುರುಪಯೋಗ ಮಾಡಿದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಧನಂಜಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಘಟನೆಯ ಇತರ ಸಂಭಾವ್ಯ ಸಂತ್ರಸ್ತರ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ