ಮಂಗಳೂರು: ಕರ್ನಾಟಕ-ಕೇರಳ ಗಡಿಯ ಉಳ್ಳಾಲದ ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಆಟೋ ರಿಕ್ಷಾ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದ್ದಾರೆ. ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಸಿ ರೋಡ್‌ನಿಂದ ತೆರಳುತ್ತಿದ್ದ ಆಟೋ ರಿಕ್ಷಾವನ್ನು ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಬಸ್‌ನ ಬ್ರೇಕ್ ವಿಫಲವಾಗಿ ನಿಯಂತ್ರಣ ಕಳೆದುಕೊಂಡು ತಂಗುದಾಣದ ಬಳಿಯ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಆಟೋದೊಳಗೆ ಕುಳಿತಿದ್ದ ಮತ್ತು ಆಶ್ರಯ ತಾಣದ ಬಳಿ ಕಾಯುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಯ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.