ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಇಬ್ಬರು ಯುವಕರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಜೂನ್ ತಿಂಗಳಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ದುಷ್ಕೃತ್ಯದ ವಿಡಿಯೋವನ್ನು ಆರೋಪಿಗಳು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸಂತ್ರಸ್ತ ಬಾಲಕಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಅತ್ಯಾಚಾರವೆಸಗಿದವರು ಮತ್ತು ವಿಡಿಯೋ ವೈರಲ್ ಮಾಡಿದವರು ಸೇರಿ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಇನ್‌ಸ್ಟಾಗ್ರಾಂ ಮೂಲಕ ಬಾಲಕಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ, ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒಬ್ಬ ಆರೋಪಿ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಇನ್ನೊಬ್ಬ ಆರೋಪಿ ಘಟನೆಯ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಡಿಯೋವನ್ನು ಆರೋಪಿಗಳು ತಮ್ಮ ಸ್ನೇಹಿತರಿಗೆ ಕಳುಹಿಸಿದ್ದು, ನಂತರ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಬಾಲಕಿ, ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಎಂಟು ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮತ್ತೊಂದು ಘಟನೆ
ಇದೇ ರೀತಿಯ ಮತ್ತೊಂದು ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಘಟನೆಯೂ ಸಹ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ಆರೋಪಿಯಾಗಿರುವ 17 ವರ್ಷದ ಬಾಲಕನಿಗೆ ಮತ್ತು ಬಾಲಕಿಗೆ ಈ ಹಿಂದೆ ಮೊರಾರ್ಜಿ ಶಾಲೆಯಲ್ಲಿ ಓದುವಾಗ ಪರಿಚಯವಾಗಿತ್ತು. ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಪೊಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ ಮತ್ತು ತನಿಖೆ ಮುಂದುವರೆದಿದೆ.





