ಮಂಗಳೂರು: ಸುಹಾಸ್ ಶೆಟ್ಟಿ ಕೊಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿರುವ ಕೋಮು ಉದ್ವಿಗ್ನತೆಯನ್ನು ಗಮನಿಸಿದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಇಂದು ಮಂಗಳೂರಿಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರತ್ಯೇಕ ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ರಚಿಸುವುದಾಗಿ ಘೋಷಿಸಿದ ಅವರು, ಕೋಮು ಗಲಭೆಗೆ ಕಾರಣವಾಗುವ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಪರಮೇಶ್ವರ್, ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದ ಕಾಪಾಡಲು ಐಜಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಎರಡು ವಾರಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು. ಈ ಟಾಸ್ಕ್ ಫೋರ್ಸ್ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ಈಗಾಗಲೇ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಚಿಕ್ಕಮಗಳೂರಿನ ಇಬ್ಬರು ಹಿಂದೂಗಳು ಇದ್ದಾರೆ ಎಂಬ ವದಂತಿಯ ಬಗ್ಗೆ ಪರಮೇಶ್ವರ್ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಆದರೆ, ತನಿಖೆಯ ವಿವರಗಳನ್ನು ಪೊಲೀಸರು ಶೀಘ್ರದಲ್ಲಿ ಬಹಿರಂಗಪಡಿಸಲಿದ್ದಾರೆ ಎಂದು ತಿಳಿಸಿದರು.
ಕೇರಳ ಮೂಲದ ಅಶ್ರಫ್ ಕೊಲೆ ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಲಾಗಿದ್ದು, ಯಾವುದೇ ಸಮುದಾಯದವರಾಗಲಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಒತ್ತಿ ಹೇಳಿದರು. ಕರಾವಳಿಯಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಸಭೆಯಲ್ಲಿ ಗದ್ದಲ
ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯ ವೇಳೆ, ಕಾಂಗ್ರೆಸ್ ಪಕ್ಷದ ಕೆಲ ಮುಸ್ಲಿಂ ಮುಖಂಡರು ಟೇಬಲ್ ಬಡಿದು ಆಕ್ರೋಶ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದರು. ಅಶ್ರಫ್ ಕೊಲೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪರಮೇಶ್ವರ್, ಎಲ್ಲ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಮನವಿ ಮಾಡಿದರು.