ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೂರಜ್ ಹೊಟೇಲ್ ಬಳಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಗಳು ಭಯಾನಕವಾಗಿವೆ.
ಸುರತ್ಕಲ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ ಒಂದು ಬೈಕ್‌ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದ ಮೂವರು ಯುವಕರು ರಾಂಗ್ ಸೈಡ್‌ನಿಂದ ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದಾರೆ. ಹೆಲ್ಮೆಟ್ ಧರಿಸದೇ, ಸಂಪೂರ್ಣ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸುತ್ತಿದ್ದ ಅವರು ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಫುಟ್‌ಬಾಲ್‌ನಂತೆ ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿದ್ದಾರೆ. ಒಬ್ಬರ ಸ್ಥಿತಿ ಅತ್ಯಂತ ವಿಷಮವಾಗಿದ್ದು, ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕನಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಅಪಘಾತದ ಭಯಾನಕತೆಯನ್ನು ತೋರಿಸುತ್ತಿವೆ. ತ್ರಿಬಲ್ ರೈಡ್ ಮಾಡುತ್ತಿದ್ದ ಯುವಕರು ರಸ್ತೆಯ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರಾಂಗ್ ಸೈಡ್‌ನಿಂದ ಹೆದ್ದಾರಿಗೆ ನುಗ್ಗಿದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರತ್ಕಲ್ ಸಂಚಾರಿ ಪೊಲೀಸರು ಈ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹೆಲ್ಮೆಟ್ ಧರಿಸದಿರುವುದು, ರಾಂಗ್ ಸೈಡ್ ಚಲನೆ, ತ್ರಿಬಲ್ ರೈಡ್ ಮಾಡುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ನಿರ್ಲಕ್ಷ್ಯದ ಚಾಲನೆಯಿಂದ ದಿನನಿತ್ಯ ಅಪಘಾತಗಳು ನಡೆಯುತ್ತಿರುವುದರಿಂದ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.