ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ಎಡಿಟ್ ಮಾಡಿ ಕೋಮು ಪ್ರಚೋದನೆ ಆರೋಪದ ಮೇಲೆ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಸ್ವಯಂಪ್ರೇರಿತ ದೂರಿನಡಿ ಪಿಎಸ್‌ಐ ಕೃಷ್ಣಪ್ಪ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಗ್ಡೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ ನಂತರ ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಹೇಶ್ ವಿಕ್ರಂ ಹೆಗ್ಡೆ ಅವರು ಸಾಮಾಜಿಕ ಜಾಲತಾಣದಲ್ಲಿ, “ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ. ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂಥಹ ಪ್ರಕರಣ ಮರುಕಳಿಸಲ್ಲ” ಎಂದು ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಎರಡು ಧರ್ಮಗಳ ನಡುವೆ ವೈರತ್ವ ಮತ್ತು ದ್ವೇಷವನ್ನು ಹುಟ್ಟುಹಾಕಿ, ಕೋಮುಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ BNS 353(2) ಅಡಿಯಲ್ಲಿ ಸೆಪ್ಟೆಂಬರ್ 9 ರಂದು ಎಫ್‌ಐಆರ್ ದಾಖಲಾಗಿದೆ.





