ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲೆಸೆತ ಘಟನೆಯ ಸತ್ಯ ಕೊನೆಗೂ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ತಮ್ಮ ಸಮುದಾಯದ ಕೆಲವು ಯುವಕರು ಕಲ್ಲು ಎಸೆದಿರುವುದಾಗಿ ಜಾಮಿಯ ಮಸೀದಿ ಕಮಿಟಿ ಅಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಆದಿಲ್ ಅಲಿಖಾನ್ ಒಪ್ಪಿಕೊಂಡಿರುವ ಅವರು, ಹಿಂದೂ ಸಮುದಾಯದವರಲ್ಲಿ ಕ್ಷಮೆಯಾಚಿಸಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 7ರಂದು ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಮದ್ದೂರಿನ ರಾಮ್ ರಹೀಂ ನಗರದ ಮಸೀದಿ ಮುಂಭಾಗದಲ್ಲಿ ಕಲ್ಲೆಸೆತ ಘಟನೆ ನಡೆದಿತ್ತು. ಈ ಘಟನೆಯಿಂದ ಮಂಡ್ಯ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳು ತೀವ್ರಗೊಂಡಾಗ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.
ಕ್ಷಮೆಯಾಚಿಸಿದ ಮುಸ್ಲಿಂ ಮುಖಂಡ
“ನಮ್ಮ ಸಮುದಾಯದ ಕೆಲವು ಯುವಕರಿಂದ ಈ ತಪ್ಪು ನಡೆದಿದೆ. ಇದರಿಂದ ಎರಡೂ ಸಮುದಾಯಗಳಿಗೆ ತೊಂದರೆಯಾಗಿದ್ದು, ನಾವು ಕ್ಷಮೆ ಕೇಳುತ್ತೇವೆ,” ಎಂದು ಆದಿಲ್ ಅಲಿಖಾನ್ ಹೇಳಿದ್ದಾರೆ. “ಇಷ್ಟು ದಿನ ಎಲ್ಲರೂ ಒಡಹುಟ್ಟಿದವರಂತೆ ಸೌಹಾರ್ದದಿಂದ ಬಾಳಿದ್ದೇವೆ. ಇನ್ಮುಂದೆಯೂ ಆ ಒಗ್ಗಟ್ಟನ್ನು ಕಾಪಾಡಿಕೊಳ್ಳೋಣ,” ಎಂದು ಜಾಮಿಯ ಮಸೀದಿ ಕಮಿಟಿ ಅಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಆದಿಲ್ ಅಲಿಖಾನ್ ಕೈಮುಗಿದು ಮನವಿ ಮಾಡಿದ್ದಾರೆ.
ಮದ್ದೂರು ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಲ್ಲೆಸೆತಕ್ಕೆ ಕಾರಣರಾದ ಆರೋಪಿಗಳನ್ನು ಗುರುತಿಸಲು ಪ್ರಯತ್ನಗಳು ಮುಂದುವರಿದಿದ್ದು, ಶಾಂತಿಭಂಗವಾಗದಂತೆ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.