ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶ: ಸಿಎಂ ಸಿದ್ದರಾಮಯ್ಯ ಆಕ್ರೋಶ!

ಮದ್ದೂರಿನಲ್ಲಿ ಗಲಾಟೆ: ಬಿಜೆಪಿಯವರ ವಿರುದ್ಧ ಸಿಎಂ ವಾಗ್ದಾಳಿ!

Untitled design (24)

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಲ್ಲು ತೂರಾಟ ಘಟನೆಯ ಬೆನ್ನಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ರಾಜ್ಯದ ಶಾಂತಿಯನ್ನು ಹಾಳುಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. “ಚಾಮುಂಡಿ ಚಲೋ ಕಾರ್ಯಕ್ರಮದ ಮೂಲಕ ಶಾಂತಿಗೆ ಭಂಗ ತಂದವರು, ಈಗ ಮದ್ದೂರಿನಲ್ಲಿಯೂ ಅದೇ ರೀತಿಯ ಕೃತ್ಯವನ್ನು ಮಾಡಿದ್ದಾರೆ,” ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.

ಮದ್ದೂರು ಗಲಾಟೆ ಸಂಬಂಧ ಈಗಾಗಲೇ 21 ಜನರನ್ನು ಪೊಲೀಸರು ಬಂಧಿಸಿದ್ದಾರೆ. “ಕಾನೂನು ಎಲ್ಲರಿಗೂ ಸಮಾನ. ತಪ್ಪು ಮಾಡಿದವರು ಯಾರೇ ಆಗಿರಲಿ ಹಿಂದೂ, ಮುಸ್ಲಿಂ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಜಾತಿ ಅಥವಾ ಧರ್ಮವನ್ನು ಗಣನೆಗೆ ತೆಗೆದುಕೊಳ್ಳದೇ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Exit mobile version