ಬೆಂಗಳೂರು: 2025ರ ಕೊನೆಯ ಪೂರ್ಣ ಚಂದ್ರಗ್ರಹಣ ಮತ್ತು ಎರಡನೇ ‘ಬ್ಲಡ್ ಮೂನ್’ ಈ ರಾತ್ರಿ ಆಗಸದಲ್ಲಿ ಕಂಗೊಳಿಸಿದೆ. ಈ ಅಪರೂಪದ ರಕ್ತಚಂದ್ರ ಗ್ರಹಣವನ್ನು ದೇಶಾದ್ಯಂತ ಜನರು ಕಣ್ಣಾರೆ ಕಂಡು ಸಂತೋಷಪಟ್ಟಿದ್ದಾರೆ. ರಾಜ್ಯದ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಹಾಸನ, ಉಡುಪಿ, ದಾವಣಗೆರೆ, ಯಾದಗಿರಿ ಕಲಬುರಗಿ ಸೇರಿದಂತೆ ಹಲವು ನಗರಗಳಲ್ಲಿ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲಾಗಿದೆ.
ಇಂದು (ಸೆಪ್ಟೆಂಬರ್ 7) ರಾತ್ರಿ 9:57ಕ್ಕೆ ಈ ಪೂರ್ಣ ಚಂದ್ರಗ್ರಹಣ ಆರಂಭವಾಗಿದ್ದು, ರಾತ್ರಿ 11:42ರಿಂದ ಸಂಪೂರ್ಣ ಗೋಚರವಾಗಲಿದೆ. ಈ ಗ್ರಹಣವು ಸುಮಾರು 3 ಗಂಟೆ 29 ನಿಮಿಷಗಳ ಕಾಲ ನಡೆಯಲಿದೆ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ಮಧ್ಯೆ ಬಂದು, ಭೂಮಿಯ ವಾತಾವರಣದ ಕೆಂಪು ಬಣ್ಣವು ಚಂದ್ರನ ಮೇಲೆ ಬಿದ್ದಿತು. ಇದರಿಂದ ಸಾಮಾನ್ಯವಾಗಿ ಬಿಳಿಯಾಗಿ ಕಾಣುವ ಚಂದ್ರನು ತಾಮ್ರ-ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡನು, ಇದನ್ನು ‘ಬ್ಲಡ್ ಮೂನ್’ ಎಂದು ಕರೆಯಲಾಗುತ್ತದೆ.
ಈ ಅಪರೂಪದ ಖಗೋಳ ವಿದ್ಯಮಾನವನ್ನು ಕಣ್ಣಾರೆ ವೀಕ್ಷಿಸಲು ಜನರು ಉತ್ಸುಕರಾಗಿದ್ದಾರೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಜನರು ಜಮಾಯಿಸಿ, ಟೆಲಿಸ್ಕೋಪ್ ಮೂಲಕ ಚಂದ್ರಗ್ರಹಣವನ್ನು ವೀಕ್ಷಿಸುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಜೈಪುರ, ಮೈಸೂರು, ಕೊಚ್ಚಿನ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಜನರು ಈ ವಿಸ್ಮಯಕಾರಿ ದೃಶ್ಯವನ್ನು ಕಂಡು ಆನಂದಿಸುತ್ತಿದ್ದಾರೆ.
ಚಂದ್ರಗ್ರಹಣದ ವೈಜ್ಞಾನಿಕ ಮಹತ್ವ:
ಚಂದ್ರಗ್ರಹಣವು ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ಚದುರಿಸಿ, ಕೆಂಪು ಬಣ್ಣವನ್ನು ಚಂದ್ರನ ಮೇಲೆ ಪ್ರಕ್ಷೇಪಿಸುತ್ತದೆ. ಈ ಕಾರಣದಿಂದ ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ವಿದ್ಯಮಾನವು ಖಗೋಳಶಾಸ್ತ್ರಜ್ಞರಿಗೆ ಮತ್ತು ಜನಸಾಮಾನ್ಯರಿಗೆ ಒಂದೇ ಸಮನಾಗಿ ಆಕರ್ಷಕವಾಗಿದೆ.
ಈ ಚಂದ್ರಗ್ರಹಣದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿದು, #BloodMoon2025 ಮತ್ತು #LunarEclipse ಟ್ಯಾಗ್‌ಗಳೊಂದಿಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನೆಹರು ತಾರಾಲಯವು ಈ ಘಟನೆಯನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ.