ಬೆಂಗಳೂರು: ಇಂದು ರಾತ್ರಿ ಸಂಪೂರ್ಣ ರಕ್ತಚಂದ್ರಗ್ರಹಣ ಸಂಭವಿಸಲಿದೆ. ಈ ಅದ್ಭುತ ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಆದರೆ, ಚಂದಿರನು ಈ ಗ್ರಹಣದ ಸಂದರ್ಭದಲ್ಲಿ ರಕ್ತವರ್ಣದಲ್ಲಿ ಕಂಗೊಳಿಸುವುದಾದರೂ ಏಕೆ? ಇದರ ವೈಜ್ಞಾನಿಕ ಕಾರಣಗಳೇನು? ಗ್ರಹಣ ವೀಕ್ಷಣೆಗೆ ಎಲ್ಲಿ ಎಂತಹ ವ್ಯವಸ್ಥೆ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಚಂದ್ರಗ್ರಹಣ ಏಕೆ ಸಂಭವಿಸುತ್ತದೆ?
ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ನಿಖರವಾಗಿ ಬಂದಾಗ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದಿರನ ಮೇಲೆ ಬೀಳುತ್ತದೆ, ಇದರಿಂದ ಚಂದಿರನು ತಾತ್ಕಾಲಿಕವಾಗಿ ಮರೆಯಾಗುತ್ತಾನೆ. ಭೂಮಿಯ ನೆರಳಿನಲ್ಲಿ ಎರಡು ಭಾಗಗಳಿವೆ:
-
ಅಂಬ್ರಾ: ಗಾಢ ಕತ್ತಲೆಯ ಭಾಗ.
-
ಪೆನಾಂಬ್ರಾ: ಹೊರಗಿನ ಮಬ್ಬಾದ ಭಾಗ.
ಚಂದಿರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸಿದಾಗ, ಅವನು ತಾಮ್ರವರ್ಣದ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಕೆಂಪು ಬಣ್ಣದ ಹಿಂದಿನ ಕಾರಣವೆಂದರೆ, ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ವಿಭಿನ್ನ ರೀತಿಯಲ್ಲಿ ಚದುರಿಸುತ್ತದೆ. ಕೆಂಪು ಬೆಳಕಿನ ತರಂಗಾಂತರವು ಉದ್ದವಾಗಿರುವುದರಿಂದ, ಅದು ಭೂಮಿಯ ವಾತಾವರಣದ ಮೂಲಕ ಚಂದಿರನ ಮೇಲೆ ಬೀಳುತ್ತದೆ, ಇದರಿಂದ ಚಂದಿರನು ರಕ್ತವರ್ಣದಲ್ಲಿ ಕಾಣಿಸುತ್ತಾನೆ.
ಯಾವಾಗ ಗ್ರಹಣ ಸಂಭವಿಸುತ್ತದೆ?
ಇಂದು (ಸೆಪ್ಟೆಂಬರ್ 7) ರಾತ್ರಿ 9:57ಕ್ಕೆ ಚಂದಿರನು ಭೂಮಿಯ ಗಾಢ ನೆರಳಾದ ಅಂಬ್ರಾದೊಳಗೆ ಪ್ರವೇಶಿಸಲು ಆರಂಭಿಸುತ್ತಾನೆ. 11: 01ಕ್ಕೆ ಚಂದಿರನು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರಿಕೊಂಡು, ರಕ್ತಚಂದ್ರಗ್ರಹಣದ ಸಂಪೂರ್ಣ ರೂಪವನ್ನು ತೋರಿಸುತ್ತಾನೆ. ಈ ಅದ್ಭುತ ದೃಶ್ಯವು ಸುಮಾರು ಒಂದು ಗಂಟೆಯವರೆಗೆ ಗೋಚರಿಸಲಿದೆ.

ರಕ್ತಚಂದ್ರಗ್ರಹಣ ವೀಕ್ಷಣೆಗೆ ಸಲಹೆಗಳು:
-
ಯಾವ ಸಾಧನ ಬೇಕಿಲ್ಲ: ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು.
-
ದೂರದರ್ಶಕ/ದುರ್ಬಿನ್: ದೂರದರ್ಶಕ ಅಥವಾ ದುರ್ಬಿನ್ ಬಳಸಿದರೆ ಚಂದಿರನ ಮೇಲಿನ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದು.
-
ಸ್ಥಳದ ಆಯ್ಕೆ: ಗ್ರಹಣವು ತಡರಾತ್ರಿಯಲ್ಲಿ ಸಂಭವಿಸುವುದರಿಂದ, ಮನೆಯ ತಾರಸಿ, ಒಳಾಂಗಣ ಅಥವಾ ಬಯಲು ಪ್ರದೇಶದಿಂದ ವೀಕ್ಷಣೆ ಸೂಕ್ತ. ಮೋಡ ಕವಿದ ವಾತಾವರಣವಿದ್ದರೂ, ಕೆಲವು ಕ್ಷಣಗಳವರೆಗೆ ಚಂದಿರನು ಸ್ಪಷ್ಟವಾಗಿ ಕಾಣಿಸಬಹುದು.
ಗ್ರಹಣ ವೀಕ್ಷಣೆಗೆ ಎಲ್ಲೆಲ್ಲ ವ್ಯವಸ್ಥೆ ಮಾಡಲಾಗಿದೆ?
ಬೆಂಗಳೂರಿನ ನೆಹರೂ ತಾರಾಲಯ, ಲಾಲ್‌ಬಾಗ್, ಮತ್ತು ರಾಜ್ಯದ ಇತರೆಡೆ ಹಲವು ಸಂಸ್ಥೆಗಳು ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿಕೊಂಡಿವೆ. ಈ ಸಂಸ್ಥೆಗಳು ದೂರದರ್ಶಕಗಳು ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಜನರಿಗೆ ಈ ಖಗೋಳ ವಿದ್ಯಮಾನವನ್ನು ಆನಂದಿಸಲು ಅವಕಾಶ ಕಲ್ಪಿಸಿವೆ.





