ರಾಜ್ಯದಲ್ಲಿ ಮತ್ತೊಂದು ಭೀಕರ ಕೆಎಸ್ಆರ್ಟಿಸಿ ಬಸ್ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ರಸ್ತೆ ಮಧ್ಯೆಯೇ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದ ಬಳಿ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದೊಡ್ಡ ಮಟ್ಟದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ನಡೆದಿದ್ದೇನು?
ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಬಸ್ ಹಾವೇರಿ ಜಿಲ್ಲೆಯ ದೇವರಗುಡ್ಡದ ಬಳಿ ತಲುಪುತ್ತಿದ್ದಂತೆ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಲಿಸುತ್ತಿದ್ದಂತೆಯೇ ಒಳಗಿನಿಂದ ದಟ್ಟವಾದ ಹೊಗೆ ಬರಲಾರಂಭಿಸಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಒಮ್ಮೆಲೇ ಆತಂಕಕ್ಕೊಳಗಾಗಿದ್ದಾರೆ. ಆದರೆ, ಪರಿಸ್ಥಿತಿಯನ್ನು ಅರಿತ ಬಸ್ ಚಾಲಕ ಗಾಬರಿಯಾಗದೆ ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾನೆ.
ಸಮಯಪ್ರಜ್ಞೆ ಮೆರೆದ ಚಾಲಕ :
ಬಸ್ಸಿನಲ್ಲಿ ಸುಮಾರು 17 ಪ್ರಯಾಣಿಕರಿದ್ದರು. ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸುವ ಮೊದಲೇ ಚಾಲಕ ಎಲ್ಲ ಪ್ರಯಾಣಿಕರನ್ನು ಶಾಂತವಾಗಿ ಕೆಳಗಿಳಿಯಲು ಸೂಚಿಸಿದನು. ಚಾಲಕನ ಈ ಚುರುಕಾದ ನಿರ್ಧಾರದಿಂದಾಗಿ ಬಸ್ಸಿನಲ್ಲಿದ್ದ ಎಲ್ಲ 17 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಬಸ್ಸಿನಾದ್ಯಂತ ಆವರಿಸಿದೆ.
ಸುಟ್ಟು ಕರಕಲಾದ ಬಸ್ :
ವಿಷಯ ತಿಳಿಯುತ್ತಿದ್ದಂತೆಯೇ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣ ಆಹುತಿಯಾಗಿತ್ತು. ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಬೆಂಕಿ ಕಾಣಿಸಿಕೊಳ್ಳಲು ಎಂಜಿನ್‌ನಲ್ಲಾದ ತಾಂತ್ರಿಕ ದೋಷವೇ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
