ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಗಳಿಗೆ ನೀರಿನ ಕಳೆ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಐತಿಹಾಸಿಕ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಕೇವಲ 1 ಅಡಿ ನೀರು ತುಂಬಿದರೆ ಜಲಾಶಯ ಸಂಪೂರ್ಣವಾಗಿ ಭರ್ಟಿಯಾಗಲಿದ್ದು, 93 ವರ್ಷಗಳ ಇತಿಹಾಸದಲ್ಲಿ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಈ ಸಾಧನೆ ನಿರೀಕ್ಷಿತವಾಗಿದೆ.
ಪ್ರಸ್ತುತ, ಕೆಆರ್‌ಎಸ್ ಜಲಾಶಯ 123.25 ಅಡಿ ಭರ್ತಿಯಾಗಿದ್ದು, ಗರಿಷ್ಠ ಸಾಮರ್ಥ್ಯ 124.80 ಅಡಿಗೆ ತಲುಪಲು ಕೇವಲ 1 ಅಡಿ ಬಾಕಿಯಿದೆ. ಜಲಾಶಯಕ್ಕೆ 73,811 ಕ್ಯೂಸೆಕ್ ಒಳಹರಿವು ಇದ್ದು, 38,983 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. 47.452 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದ್ದು, ಗರಿಷ್ಠ ಸಾಮರ್ಥ್ಯ 49.452 ಟಿಎಂಸಿಗೆ ತಲುಪಲು ಕೇವಲ 2 ಟಿಎಂಸಿ ನೀರು ಬಾಕಿಯಿದೆ. ಇಂದು ಮಧ್ಯಾಹ್ನದ ವೇಳೆಗೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದೆ.
ಕೆಆರ್‌ಎಸ್ ಜಲಾಶಯ 1932ರಲ್ಲಿ ನಿರ್ಮಾಣವಾದಾಗಿನಿಂದ 93 ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿಯಾಗಿರುವುದು ಇದೇ ಮೊದಲ ಬಾರಿ. ಈ ಐತಿಹಾಸಿಕ ದಾಖಲೆಯ ಸಾಧನೆಗೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯೇ ಕಾರಣ. ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ.
ರೈತರಿಗೆ ಒಳ್ಳೆಯ ಸುದ್ದಿ
ಕೆಆರ್‌ಎಸ್ ಜಲಾಶಯ ಭರ್ತಿಯಾದರೆ, ಕಾವೇರಿ ಕೊಳ್ಳದ ರೈತರಿಗೆ ನೀರಾವರಿ ಸೌಲಭ್ಯ ಒದಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಬೆಂಬಲ ಸಿಗಲಿದೆ. ಜಲಾಶಯದ ಒಳಹರಿವು ಮತ್ತು ಭರ್ತಿಯಿಂದಾಗಿ ಮಂಡ್ಯ, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲ ಸಂಪನ್ಮೂಲದ ಭದ್ರತೆ ಇನ್ನಷ್ಟು ಬಲಗೊಳ್ಳಲಿದೆ.
ಈ ಘಟನೆಯಿಂದ ರಾಜ್ಯದ ಜನತೆಯಲ್ಲಿ ಸಂತಸದ ವಾತಾವರಣವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಆರ್‌ಎಸ್ ಜಲಾಶಯದ ಈ ಸಾಧನೆಯ ಕುರಿತು ಚರ್ಚೆಗಳು ಜೋರಾಗಿವೆ. ಜಲಾಶಯದ ಭರ್ತಿಯಿಂದ ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಗೆ ಒಂದು ಮಹತ್ವದ ಮೈಲಿಗಲ್ಲು ಸಿಗಲಿದೆ.





