ಕೊಪ್ಪಳ: ಕನ್ನಡ ಮಾತನಾಡು ಎಂದು ಒತ್ತಾಯಿಸಿದ್ದಕ್ಕೆ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಟಿಕೆಟ್ ಕಲೆಕ್ಟರ್ ಹಲ್ಲೆ ನಡೆಸಿರುವ ಘಟನೆ ಯಲಹಂಕ ಸಮೀಪ ನಡೆದಿದೆ. ಪ್ರಯಾಣಿಕನ ಮೊಬೈಲ್ ಕಿತ್ತುಕೊಂಡು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ ಕೊಪ್ಪಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನಿಂದ ಕೊಪ್ಪಳಕ್ಕೆ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ಮಹಮ್ಮದ್ ಭಾಷಾ, ರೈಲು ಯಲಹಂಕ ಸಮೀಪ ತಲುಪಿದಾಗ ಟಿಕೆಟ್ ತಪಾಸಣೆಗೆ ಬಂದ ಕಲೆಕ್ಟರ್‌ಗೆ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಕಲೆಕ್ಟರ್ “ಕನ್ನಡ ಬರಲ್ಲ” ಎಂದು ಉತ್ತರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಲೆಕ್ಟರ್, ಮಹಮ್ಮದ್ ಭಾಷಾ ಅವರ ಮೊಬೈಲ್ ಕಿತ್ತುಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಹಮ್ಮದ್ ಭಾಷಾ, “ನಾನು ಕಲೆಕ್ಟರ್‌ಗೆ ಕನ್ನಡದಲ್ಲಿ ಮಾತನಾಡಿ ಎಂದೆ. ಅವರು ಕನ್ನಡ ಬರಲ್ಲ ಎಂದು ಹೇಳಿ, ನನ್ನ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದರು,” ಎಂದು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯದ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೂ ಮುಂಚೆ ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಕನ್ನಡಿಗನೊಬ್ಬನ ಮೇಲೆ ದೌರ್ಜನ್ಯ ಎಸಗಲಾಗಿತ್ತು. ಈಗ ಕೊಪ್ಪಳದ ಈ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಮಹಮ್ಮದ್ ಭಾಷಾ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಟಿಕೆಟ್ ಕಲೆಕ್ಟರ್‌ನ ದೌರ್ಜನ್ಯವನ್ನು ಖಂಡಿಸಿ, ಆತನನ್ನು ಅಮಾನತುಗೊಳಿಸುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕರವೇ ಮುಖಂಡ ಗೀರಿಶಾನಂದ, “ರಾಜ್ಯದಲ್ಲಿ ಕನ್ನಡಿಗರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ. ಕನ್ನಡಿಗರು ಭಯದ ವಾತಾವರಣದಲ್ಲಿದ್ದಾರೆ. ಕೂಡಲೇ ಕಲೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವೆವು,” ಎಂದು ಎಚ್ಚರಿಕೆ ನೀಡಿದ್ದಾರೆ.





