ಕೊಪ್ಪಳ: ತಾಲೂಕಿನ ಕುಕನಪಳ್ಳಿ ಗ್ರಾಮದ ಹೊರವಲಯದ ಬೂದಗುಂಪ ಗ್ರಾಮದಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ಮೃತದೇಹವನ್ನು ಸುಟ್ಟುಹಾಕಿ, ನಂತರ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ ಮಹಿಳೆಯೊಬ್ಬಳು ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾಳೆ. ಹತ್ಯೆಯಾದ ವ್ಯಕ್ತಿ ಬೂದಗುಂಪ ಗ್ರಾಮದ ನಿವಾಸಿ ದ್ಯಾಮಣ್ಣ ಧರ್ಮಪ್ಪ ವಜ್ರಬಂಡಿ (38). ಆರೋಪಿಗಳಾದ ಮೃತನ ಪತ್ನಿ ನೇತ್ರಾವತಿ ವಜ್ರಬಂಡಿ (31) ಮತ್ತು ಆಕೆಯ ಪ್ರಿಯಕರ ಕಾಮನೂರು ಗ್ರಾಮದ ಸೋಮಪ್ಪ ಕುರುಬಡಗಿ (35) ಯನ್ನು ಕೊಪ್ಪಳ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನೇತ್ರಾವತಿ ಮತ್ತು ದ್ಯಾಮಣ್ಣ ವಜ್ರಬಂಡಿ ಅವರ ವಿವಾಹ 14 ವರ್ಷಗಳ ಹಿಂದೆ ನಡೆದಿತ್ತು. ಆದರೆ, ನೇತ್ರಾವತಿ ತನ್ನ ಹಳೆಯ ಪ್ರಿಯಕರ ಸೋಮಪ್ಪ ಕುರುಬಡಗಿಯೊಂದಿಗೆ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದಳು. ಈ ಸಂಬಂಧಕ್ಕೆ ದ್ಯಾಮಣ್ಣ ಅಡ್ಡಿಯಾಗಿದ್ದ ಕಾರಣ, ಜುಲೈ 25 ರಂದು ನೇತ್ರಾವತಿ ಮತ್ತು ಸೋಮಪ್ಪ ಒಟ್ಟಾಗಿ ದ್ಯಾಮಣ್ಣನನ್ನು ಹೊಲಕ್ಕೆ ಕರೆದು ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಮೃತದೇಹವನ್ನು ಬೈಕ್‌ನಲ್ಲಿ 5-6 ಕಿ.ಮೀ ದೂರಕ್ಕೆ ಸಾಗಿಸಿ, ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ.
ಸಂಭ್ರಮದಿಂದ ನಾಗರ ಪಂಚಮಿ ಆಚರಣೆ ಮಾಡಿದ ಕಿರಾತಕಿ ಹೆಂಡ್ತಿ:
ಕೊಲೆಯಾದ ಕೆಲವೇ ದಿನಗಳಲ್ಲಿ ನೇತ್ರಾವತಿ ತನ್ನ ಕುಟುಂಬದೊಂದಿಗೆ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ್ದಳು. ತನ್ನ ಪತಿಯ ಕುರಿತು ಕೇಳಿದವರಿಗೆ, “ಅವರು ಧರ್ಮಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಿದ್ದಾರೆ” ಎಂದು ಸುಳ್ಳು ಕಥೆ ಹೇಳುತ್ತಿದ್ದಳು. ಆದರೆ, ವಾರ ಕಳೆದರೂ ದ್ಯಾಮಣ್ಣ ಮರಳಿ ಬಾರದಿರಲು, ಸಂಬಂಧಿಕರು ಅನುಮಾನಗೊಂಡು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತದೇಹವನ್ನು ಪೂರ್ಣವಾಗಿ ಸುಟ್ಟುಹಾಕಿದ್ದರಿಂದ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಅನಾಮಧೇಯ ಶವವೆಂದು ಪರಿಗಣಿಸಿ, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ, ಪೊಲೀಸರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತನಿಖೆ ನಡೆಸಿ, ಸಂಬಂಧಿಕರ ದೂರಿನ ಆಧಾರದಲ್ಲಿ ನೇತ್ರಾವತಿ ಮತ್ತು ಸೋಮಪ್ಪನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯಲ್ಲಿ ಇಬ್ಬರೂ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಕೊಲೆಗೆ ಕಾರಣವಾದ ಅಕ್ರಮ ಸಂಬಂಧ ಮತ್ತು ದ್ಯಾಮಣ್ಣನನ್ನು ತೆಗೆದುಹಾಕುವ ಯೋಜನೆಯನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.