ಕೊಪ್ಪಳ: ಕೊಪ್ಪಳ ನಗರದ ವಾರ್ಡ್ ಸಂಖ್ಯೆ 3ರ ಮಸೀದಿ ಮುಂಭಾಗದಲ್ಲಿ ಆಗಸ್ಟ್ 3ರ ರಾತ್ರಿ 27 ವರ್ಷದ ಗವಿಸಿದ್ದಪ್ಪ ನಾಯಕ್ ಎಂಬ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಪ್ರಮುಖ ಆರೋಪಿ ಸಾಧಿಕ್ ಕೊಲ್ಕಾರ್ ಮಚ್ಚಿನಿಂದ ಕೊಚ್ಚಿ ಗವಿಸಿದ್ದಪ್ಪನನ್ನು ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಧಿಕ್ ಸೇರಿದಂತೆ ಗೇಸುದರಾಜ್ ಪಟೇಲ್, ನಿಝಾಮುದ್ದಿನ್, ಮತ್ತು ಮೆಹಬೂಬ್ ಅಲಿಯಾಸ್ ಗಿಡ್ಡ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲವ್ ಟ್ರಯಾಂಗಲ್:
ಗವಿಸಿದ್ದಪ್ಪ ಕೊಪ್ಪಳದ ಕುರಬರ ಓಣಿಯ ನಿವಾಸಿಯಾಗಿದ್ದು, ವಾಲ್ಮೀಕಿ ಸಮುದಾಯಕ್ಕೆ ಸೇರಿದವನು. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಗವಿಸಿದ್ದಪ್ಪ, ಮೂವರು ಸಹೋದರಿಯರೊಂದಿಗೆ ಬೆಳೆದವನು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಇವನು ಹಿಂದೂತ್ವವಾದಿಯಾಗಿದ್ದ. ಗವಿಸಿದ್ದಪ್ಪ ಕಳೆದ 2-3 ವರ್ಷಗಳಿಂದ ಕೊಪ್ಪಳದ ಶಾಂತಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಐದು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಲು ಓಡಿಹೋಗಿದ್ದರು, ಆದರೆ ಯುವತಿ ಅಪ್ರಾಪ್ತೆಯಾಗಿದ್ದರಿಂದ, ಎರಡೂ ಕಡೆಯ ಮನೆಯವರು ಜಾತಿಯ ವಿಷಯವನ್ನು ಎತ್ತಿ, ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಇದರಿಂದ ಗವಿಸಿದ್ದಪ್ಪ ಸೈಲೆಂಟ್ ಆಗಿದ್ದ.
ತನಿಖೆಯಿಂದ ಬಯಲಾಯ್ತು ಕೃತ್ಯ:
ಈ ಯುವತಿಯು ಗವಿಸಿದ್ದಪ್ಪನನ್ನು ಪ್ರೀತಿಸುವ ಮೊದಲು ಆರೋಪಿ ಸಾಧಿಕ್‌ನೊಂದಿಗೆ ಪ್ರೀತಿಯಲ್ಲಿದ್ದಳು. ಸಾಧಿಕ್‌ನೊಂದಿಗೆ ಬ್ರೇಕ್‌ಅಪ್ ಮಾಡಿಕೊಂಡ ನಂತರ ಗವಿಸಿದ್ದಪ್ಪನೊಂದಿಗೆ ಪ್ರೀತಿಯನ್ನು ಆರಂಭಿಸಿದ್ದಳು. ಈ ವಿಷಯ ತಿಳಿದ ಸಾಧಿಕ್, ಗವಿಸಿದ್ದಪ್ಪನೊಂದಿಗೆ ಹಲವು ಬಾರಿ ಜಗಳವಾಡಿದ್ದ. ಈ ಘರ್ಷಣೆ ತಾರಕಕ್ಕೇರಿ, ರವಿವಾರ ರಾತ್ರಿ 7:30ರ ಸುಮಾರಿಗೆ ಮಸೀದಿ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಸಾಧಿಕ್ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ.
ಕೊಲೆಗೆ ಕಾರಣವೇನು?
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರ ಪ್ರಕಾರ, ಗವಿಸಿದ್ದಪ್ಪ ತನ್ನ ಮಾಜಿ ಪ್ರೇಯಸಿಯಾದ ಮುಸ್ಲಿಂ ಯುವತಿಗೆ ಕಿರಿಕಿರಿ ಉಂಟುಮಾಡುತ್ತಿದ್ದ. ಈ ಕಾರಣದಿಂದ ಸಾಧಿಕ್ ಕೊಲೆಗೆ ಮುಂದಾಗಿದ್ದಾನೆ ಎಂದು ಹೇಳಿದ್ದಾರೆ. ಆದರೆ, ಗವಿಸಿದ್ದಪ್ಪನ ತಂದೆ ಈ ಹೇಳಿಕೆಯನ್ನು ಖಂಡಿಸಿದ್ದಾರೆ. “ನನ್ನ ಮಗ ಯಾವುದೇ ಕಿರಿಕಿರಿ ಮಾಡಿರಲಿಲ್ಲ. ಆ ಯುವತಿಯೇ ಗವಿಸಿದ್ದಪ್ಪನಿಗೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದಳು. ಈ ಕೊಲೆಗೆ ಸಾಧಿಕ್ ಮತ್ತು ಆ ಯುವತಿ ಇಬ್ಬರೂ ಕಾರಣ. ಆಕೆಯ ವಿರುದ್ಧವೂ ದೂರು ದಾಖಲಿಸುತ್ತೇನೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ತಿರುವು ಮತ್ತು ಸಮುದಾಯದ ಆಕ್ರೋಶ:
ಈ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯಕ್ಕೆ ಸೇರಿದವನಾಗಿದ್ದು, ಈ ಘಟನೆಯನ್ನು ಸಮುದಾಯ ಗಂಭೀರವಾಗಿ ಪರಿಗಣಿಸಿದೆ. ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ, ಸಮುದಾಯದ ಮುಖಂಡರು ಶುಕ್ರವಾರ ದೊಡ್ಡ ಮಟ್ಟದ ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ಮಾಜಿ ಸಚಿವ ಶ್ರೀರಾಮುಲು ಸಭೆಯಲ್ಲಿ ಭಾಗವಹಿಸಿ, ಗವಿಸಿದ್ದಪ್ಪನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಶ್ರೀರಾಮುಲು, “ಕೊಲೆ ಆರೋಪಿ ಸಾಧಿಕ್ PFI ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ. ಈ ಕೊಲೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ,” ಎಂದು ಆರೋಪಿಸಿದ್ದಾರೆ.