ರಾಜಣ್ಣ ರಾಜೀನಾಮೆ ಹಿಂಪಡೆಯದಿದ್ದರೆ ಉಗ್ರ ಹೋರಾಟ: ರಸ್ತೆ ತಡೆದು ಬೆಂಬಲಿಗರು ಆಕ್ರೋಶ!

ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಮಧುಗಿರಿ ಬಂದ್!

Untitled design 2025 08 12t131254.958

ತುಮಕೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರ ಸಚಿವ ಸ್ಥಾನದ ರಾಜೀನಾಮೆಗೆ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹೇರಿರುವುದನ್ನು ವಿರೋಧಿಸಿ, ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ತುಮಕೂರಿನ ಮಧುಗಿರಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರ ರಾಜೀನಾಮೆಯನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟಕ್ಕೆ ಮಾಡುವುದಾಗಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಧುಗಿರಿಯ ಹೆದ್ದಾರಿಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಬೆಂಬಲಿಗರು ರಸ್ತೆಯ ಮೇಲೆ ಮಲಗಿ, ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರವನ್ನು ಖಂಡಿಸಿದ್ದಾರೆ. ರಾಜಣ್ಣ ಅವರ ಬೆಂಬಲಿಗರು ಮಧುಗಿರಿಯಲ್ಲಿ ಬಂದ್‌ಗೆ ಕರೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಮತ್ತು ಹೈಕಮಾಂಡ್ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ. ವಾಲ್ಮೀಕಿ ಕ್ರಾಂತಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿವೆ.

ರಾಜಣ್ಣ ಅವರ ಬೆಂಬಲಿಗರೊಬ್ಬರು, “ಕೆ.ಎನ್. ರಾಜಣ್ಣ ನೇರವಾದ ವ್ಯಕ್ತಿತ್ವದ ಜಾತ್ಯಾತೀತ ನಾಯಕ. ಅವರು ಸತ್ಯವನ್ನು ಹೇಳಿದ್ದಕ್ಕೆ ಸಚಿವ ಸ್ಥಾನ ಕಸಿದುಕೊಂಡಿರುವುದು ತಪ್ಪು. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ರಾಜೀನಾಮೆಯನ್ನು ಹಿಂಪಡೆಯಬೇಕು,” ಎಂದು ಆಗ್ರಹಿಸಿದ್ದಾರೆ. “ನಾವು ಕಾಂಗ್ರೆಸ್‌ಗೆ ಮತ ಹಾಕಿರುವುದು ರಾಜಣ್ಣ ಅವರಿಗಾಗಿಯೇ. ಅವರಿಗಾಗಿ ಸಂಘಟನೆ ಮಾಡಿದ್ದೇವೆ. ಈ ರಾಜೀನಾಮೆಯ ಹಿಂದೆ ಕಾಣದ ಕೈಗಳ ಕೈವಾಡ ಇದೆ, ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಾಗಲಿದೆ,” ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂತರಿಕ ಗುಂಪುಗಾರಿಕೆಯ ಆರೋಪ:

ಅಹಿಂದ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, “ರಾಜಣ್ಣ ತುಮಕೂರು ಜಿಲ್ಲೆಗೆ ಅರಸರಿದ್ದಂತೆ, ಅಹಿಂದ ವರ್ಗದ ದೇವರು. ಅವರನ್ನು ವಜಾಗೊಳಿಸಿದರೆ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಲಿದೆ. ರಾಜ್ಯಾದ್ಯಂತ ಹೋರಾಟ ನಡೆಸಿ ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಣ್ಣರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಮಕೂರಿನಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ದೊಡ್ಡ ಪೆಟ್ಟು ಬೀಳಲಿದೆ. “ರಾಜೀನಾಮೆಯನ್ನು ಹಿಂಪಡೆಯದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಷ್ಟವಾಗಲಿದೆ,”  ಎಂದು ರಾಜಣ್ಣರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

Exit mobile version