ತುಮಕೂರು: ಕಾಂಗ್ರೆಸ್ ಹೈಕಮಾಂಡ್‌ನ ಆದೇಶದಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ನಿರ್ಧಾರಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗರು ಮಧುಗಿರಿ ತಾಲೂಕನ್ನು ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯವರೆಗೆ ಬಂದ್ ಮಾಡಿ ಪ್ರತಿಭಟಿಸುವ ನಿರ್ಧಾರ ಕೈಗೊಂಡಿದ್ದರು.
ಆದರೆ, ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಬಲಿಗರು ರಸ್ತೆಯ ಮೇಲೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದು, ಕೆಲವರು ಪೆಟ್ರೋಲ್ ಸುರಿದುಕೊಂಡು ಸ್ವಯಂ ದಹನದ ಪ್ರಯತ್ನ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಪ್ರಮುಖ ರಸ್ತೆಗಳಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದು, ಸ್ಥಳೀಯ ವ್ಯಾಪಾರ ಮತ್ತು ಸಂಚಾರಕ್ಕೆ ಅಡಚಣೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯಿಂದ ರಾಜಕೀಯ ವಲಯದಲ್ಲಿ ಮತ್ತಷ್ಟು ಗೊಂದಲಗಳು ಉದ್ಭವಿಸುವ ಸಾಧ್ಯತೆಯಿದೆ.