ಬೆಂಗಳೂರು: ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ಆಮಿರ್ ಖಾನ್‌ರಿಂದ ಖರೀದಿಸಿದ ಎರಡು ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳಿಗೆ ಕೆಜಿಎಫ್ ಬಾಬು ಕೊನೆಗೂ ಸುಮಾರು 38 ಲಕ್ಷ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ. ಆರ್‌ಟಿಒ ಅಧಿಕಾರಿಗಳಿಗೆ ಡಿಮಾಂಡ್ ಡ್ರಾಫ್ಟ್ (ಡಿಡಿ) ಮೂಲಕ ಈ ತೆರಿಗೆಯನ್ನು ಕಟ್ಟಲಾಗಿದೆ.
ಇಂದು ಬೆಂಗಳೂರಿನ ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ನಿವಾಸದ ಮೇಲೆ ಆರ್‌ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ದಾಳಿ ನಡೆಸಿತ್ತು. ಕೆಜಿಎಫ್ ಬಾಬು ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳಿಗೆ ಕರ್ನಾಟಕದಲ್ಲಿ ತೆರಿಗೆ ಪಾವತಿಯಾಗಿರಲಿಲ್ಲ. ಈ ಎರಡು ಕಾರುಗಳು ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ (MH 11 AX 1) ಮತ್ತು ಆಮಿರ್ ಖಾನ್ (MH 02 BB 2) ಬಳಸಿದ್ದವು. ದಾಳಿಯ ಬಳಿಕ ಕೆಜಿಎಫ್ ಬಾಬು, ಅಮಿತಾಭ್ ಬಚ್ಚನ್‌ರಿಂದ ಖರೀದಿಸಿದ ಕಾರಿಗೆ 18.53 ಲಕ್ಷ ರೂ. ಮತ್ತು ಆಮಿರ್ ಖಾನ್‌ರಿಂದ ಖರೀದಿಸಿದ ಕಾರಿಗೆ 19.73 ಲಕ್ಷ ರೂ. ತೆರಿಗೆಯನ್ನು ಡಿಡಿ ಮೂಲಕ ಪಾವತಿಸಿದ್ದಾರೆ.
ಕೆಜಿಎಫ್ ಬಾಬು ಸೆಲೆಬ್ರಿಟಿಗಳ ಕಾರುಗಳ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದಾರೆ. ಅಮಿತಾಭ್ ಬಚ್ಚನ್‌ರಿಂದ ಖರೀದಿಸಿದ ರೋಲ್ಸ್ ರಾಯ್ಸ್ ಮತ್ತು ಆಮಿರ್ ಖಾನ್ ಒಂದು ವರ್ಷ ಬಳಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದರು. ಇದರ ಜೊತೆಗೆ, ತಮ್ಮ ಮೊಮ್ಮಗಳಿಗಾಗಿ ವೆಲ್‌ಫೇರ್ ಕಾರ್ ಕೂಡ ಖರೀದಿಸಿದ್ದರು. ಒಂದೊಂದು ಕಾರಿನ ಹಿಂದೆ ಒಂದೊಂದು ವಿಶಿಷ್ಟ ಕತೆ ಇದೆ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ.
ಕೆಜಿಎಫ್ ಬಾಬುರ ಹೇಳಿದ್ದೇನು?
ಕೆಜಿಎಫ್ ಬಾಬು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಈ ಎರಡು ರೋಲ್ಸ್ ರಾಯ್ಸ್ ಕಾರುಗಳು ಮಹಾರಾಷ್ಟ್ರ ರಿಜಿಸ್ಟ್ರೇಷನ್‌ನವು. ಮಹಾರಾಷ್ಟ್ರದಲ್ಲಿ ಲೈಫ್ ಟೈಮ್ ತೆರಿಗೆ ಕಟ್ಟಿದ್ದೆ. ಆದರೆ, ಕರ್ನಾಟಕದಲ್ಲಿ ತೆರಿಗೆ ಕಟ್ಟಬೇಕೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪು ಮಾಡಿದ್ದೇನೆ. ಆರ್‌ಟಿಒ ಅಧಿಕಾರಿಗಳು ವಿಷಯವನ್ನು ಮನವರಿಕೆ ಮಾಡಿದರು. ಜವಾಬ್ದಾರಿಯುತ ವ್ಯಕ್ತಿಯಾಗಿ, ಆಮಿರ್ ಖಾನ್‌ರಿಂದ ಖರೀದಿಸಿದ ಕಾರಿಗೆ 19.73 ಲಕ್ಷ ರೂ. ಮತ್ತು ಬಚ್ಚನ್‌ರಿಂದ ಖರೀದಿಸಿದ ಕಾರಿಗೆ 18.53 ಲಕ್ಷ ರೂ. ತೆರಿಗೆ ಕಟ್ಟಿದ್ದೇನೆ,” ಎಂದಿದ್ದಾರೆ.