ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್, ಕೇರಳ ದೇವಸ್ಥಾನದ ಅರ್ಚಕ ಬಂಧನ

ಕೇರಳದ ದೇವಾಲಯದ ಅರ್ಚಕನಿಂದ ಆಘಾತಕಾರಿ ಕೃತ್ಯ: ಬೆಂಗಳೂರಿನಲ್ಲಿ ಬಂಧನ

Untitled design (48)

ಬೆಂಗಳೂರು: ಕೇರಳದ ತ್ರಿಶೂರ್‌ನ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ಮಾಟ-ಮಂತ್ರ ನಿವಾರಣೆಗೆಂದು ತೆರಳಿದ ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ದೇವಾಲಯದ ಅರ್ಚಕ ಅರುಣ್‌ನನ್ನು ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಬೆಳ್ಳಂದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕುಟುಂಬದಲ್ಲಿ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಯೊಬ್ಬರು, ಯಾರೋ ಮಾಟ-ಮಂತ್ರ ಮಾಡಿದ್ದಾರೆಂದು ಭಾವಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಮಾಹಿತಿಯ ಆಧಾರದ ಮೇಲೆ ಕೇರಳದ ತ್ರಿಶೂರ್‌ನ ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ತೆರಳಿದ್ದರು. ಅಲ್ಲಿ ಅರ್ಚಕ ಅರುಣ್‌ನೊಂದಿಗೆ ಪರಿಚಯವಾಯಿತು. ಆಕೆಗೆ ಗಂಡ ಇಲ್ಲದಿರುವುದನ್ನು ತಿಳಿದ ಅರುಣ್, ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಬ್ಲ್ಯಾಕ್‌ಮೇಲ್‌ಗೆ ವಿಡಿಯೋ ರೆಕಾರ್ಡಿಂಗ್

ಅರುಣ್, ಮಾಟ-ಮಂತ್ರ ನಿವಾರಣೆಗಾಗಿ 24,000 ರೂ. ಹಣವನ್ನು ಪಡೆದು, ಮಹಿಳೆಯ ಸಂಪರ್ಕ ಸಂಖ್ಯೆಯನ್ನು ಪಡೆದಿದ್ದಾನೆ. ಬಳಿಕ ತಡರಾತ್ರಿಯಲ್ಲಿ ವಾಟ್ಸಾಪ್ ಕರೆಗಳ ಮೂಲಕ ಆಕೆಯನ್ನು ಕಿರುಕುಳಕ್ಕೊಳಗಾಗಿಸಿದ್ದಾನೆ. ಮಾಟ-ಮಂತ್ರ ನಿವಾರಣೆಗಾಗಿ ಆಕೆ ಬೆತ್ತಲಾಗಬೇಕೆಂದು ಒತ್ತಾಯಿಸಿ, ಒಪ್ಪದಿದ್ದರೆ ಆಕೆಯ ಮಕ್ಕಳಿಗೆ ಹಾನಿಯಾಗುವಂತೆ ಪೂಜೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಗೆ ಭಯಗೊಂಡ ಮಹಿಳೆ ಬೆತ್ತಲಾದಾಗ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

ಕೇರಳದಲ್ಲಿ ಅತ್ಯಾಚಾರಕ್ಕೆ ಯತ್ನ

ಅರುಣ್, ರೆಕಾರ್ಡ್ ಮಾಡಿದ ವಿಡಿಯೋವನ್ನು ಬಳಸಿಕೊಂಡು ಮಹಿಳೆಯನ್ನು ಕೇರಳಕ್ಕೆ ಕರೆಯಿಸಿದ್ದಾನೆ. ಈ ವೇಳೆ ಆತನೊಂದಿಗೆ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಕೂಡ ಸೇರಿಕೊಂಡು, ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅರ್ಚಕರ ಕಿರುಕುಳಕ್ಕೆ ಬೇಸತ್ತ ಮಹಿಳೆ, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡರಾತ್ರಿಯ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಪೊಲೀಸರು ಅರುಣ್‌ನನ್ನು ಬಂಧಿಸಿದ್ದು, ಉನ್ನಿ ದಾಮೋದರನ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Exit mobile version