ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್,
“ಇದು ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು, ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರ” ಎಂದು ಕಿಡಿಕಾರಿದ್ದಾರೆ.
‘ವೋಟ್ ಚೋರ್ ಕೌನ್ ಹೈ?’ ಎಂದು ಪ್ರಶ್ನಿಸಿದ ಅಶೋಕ್
ಮರು ಎಣಿಕೆಯ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಆರ್. ಅಶೋಕ್, “ಸತ್ಯಕ್ಕೆ ಜಯ ಸಿಕ್ಕಿದೆ, ಕಾಂಗ್ರೆಸ್ ಈಗ ಮೌನವಾಗಿದೆ. 2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಲಾಗಿತ್ತು. ಈಗ ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಕಾಂಗ್ರೆಸ್‌ನ ಅಸಲಿ ಮುಖವಾಡ ಕಳಚಿಬಿದ್ದಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು – ಸತ್ಯಕ್ಕೆ ಜಯ!
ವೋಟ್ ಚೋರ್ ಕೌನ್ ಹೈ?
ರಾಹುಲ್ ಗಾಂಧಿ ಹೈ!ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನ ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ… pic.twitter.com/P3gvGa9AmG
— R. Ashoka (@RAshokaBJP) May 3, 2026
ಜೀವರಾಜ್ ಕಾನೂನು ಹೋರಾಟಕ್ಕೆ ಸಂದ ಜಯ
ಕಳೆದ ಚುನಾವಣೆಯಲ್ಲಿ ಕೇವಲ 201 ಮತಗಳಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್, ಅಧಿಕಾರ ಬಲಕ್ಕೆ ಮಣಿಯದೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್‌ನ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ನೀಡಿದ ಐತಿಹಾಸಿಕ ಆದೇಶದಂತೆ ಮೇ 2 ರಂದು ಮರು ಎಣಿಕೆ ನಡೆಯಿತು. ಈ ಸುದೀರ್ಘ ಹೋರಾಟವನ್ನು ಶ್ಲಾಘಿಸಿರುವ ಅಶೋಕ್, “ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಇದು ಶೃಂಗೇರಿಯ ಪ್ರತಿ ಮತದಾರನ ಮೌಲ್ಯಕ್ಕೆ ಸಂದ ಜಯ” ಎಂದು ಜೀವರಾಜ್ ಅವರನ್ನು ಅಭಿನಂದಿಸಿದ್ದಾರೆ.
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಮರು ಎಣಿಕೆಯಲ್ಲಿ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ ಎಂಬ ವರದಿಗಳು ಹೊರಬಿದ್ದಿವೆ. ಇದರಿಂದಾಗಿ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಶುರುವಾಗಿದ್ದರೆ, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚುನಾವಣಾಧಿಕಾರಿಗಳು ಈಗ ಈ ಮರು ಎಣಿಕೆಯ ಅಂತಿಮ ವರದಿಯನ್ನು ಹೈಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ.
