ರಾಜ್ಯದ ವಿವಿಧೆಡೆ ಪ್ರತ್ಯೇಕ ರಸ್ತೆ ಅಪಘಾತ: ಮೂರು ಸಾ*ವು, 6 ಮಂದಿಗೆ ಗಂಭೀರ ಗಾಯ!

ಕಾರವಾರ: ಖಾಸಗಿ ಬಸ್ ಹಳ್ಳಕ್ಕೆ ಬಿದ್ದು ಒಬ್ಬ ಸಾ*ವು, ಐವರಿಗೆ ಗಂಭೀರ ಗಾಯ

0 (21)

ಕಾರವಾರ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಅಂಕೋಲದ ರಾಷ್ಟ್ರೀಯ ಹೆದ್ದಾರಿ 63ರ ಅಗಸೂರು ಬಳಿಯ ಬ್ರಿಡ್ಜ್‌ನ ತಡೆಗೋಡೆಗೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಘಟನೆಯಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿ 18 ಪ್ರಯಾಣಿಕರಿದ್ದರು. ಅತಿವೇಗದಿಂದಾಗಿ ನಿಯಂತ್ರಣ ತಪ್ಪಿದ ಬಸ್ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಂಕೋಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಅಂಕೋಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಬಸ್ಸನ್ನು ಹಳ್ಳದಿಂದ ಮೇಲಕ್ಕೆತ್ತಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ADVERTISEMENT
ರಾಯಚೂರು: ಬೈಕ್ ಡಿವೈಡರ್‌ಗೆ ಡಿಕ್ಕಿ, ಒಬ್ಬ ಸಾವು

ರಾಯಚೂರು: ರಾಯಚೂರು ನಗರದ ಆರ್‌ಟಿಒ ವೃತ್ತದ ಬಳಿ ಬೈಕ್‌ವೊಂದು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಘಟನೆಯಲ್ಲಿ ಬೈಕ್ ಸವಾರ ರಾಕೇಶ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಬಾಲಾಜಿ (28) ಗಂಭೀರವಾಗಿ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಆರ್‌ಟಿಒ ಮಾರ್ಗದಲ್ಲಿ ಸಾಗುತ್ತಿರುವಾಗ ಏಕಾಏಕಿ ಸ್ಕಿಡ್ ಆಗಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ಘಟನೆ ನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಿಂದ ಮಹಿಳೆ ಸಾವು

ತುಮಕೂರು: ತುಮಕೂರು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಬಳಿ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ರಾಜೇಶ್ವರಿ (45) ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ತಾಲೂಕಿನ ಅರಕೆರೆ ಗ್ರಾಮದ ನಿವಾಸಿಯಾಗಿರುವ ರಾಜೇಶ್ವರಿ, ಗುಬ್ಬಿ ಗೇಟ್ ಸರ್ಕಲ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಬೆಳಗ್ಗೆ ಹೋಟೆಲ್‌ಗೆ ತೆರಳುವ ವೇಳೆ ಕೆಎಸ್‌ಆರ್‌ಟಿಸಿ ಬಸ್‌ವೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಈ ಘಟನೆಯನ್ನು ಹಿಟ್ ಆಂಡ್ ರನ್ ಪ್ರಕರಣವೆಂದು ಪೊಲೀಸರು ಭಾವಿಸಿದ್ದು, ತುಮಕೂರು ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಘಟನೆ ತುಮಕೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಕರಣ ದಾಖಲಾಗಿದೆ.

Exit mobile version