ಕರ್ನಾಟಕ ಹಾಲು ಒಕ್ಕೂಟದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬಯಲಾಗಿದೆ. KAS ಅಧಿಕಾರಿ ಎಂದು ಗುರುತಿಸಿಕೊಂಡು ಆರೋಪಿ ಕೃಷ್ಣನ್ ಎಂಬಾತ ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿ ಪಡೆದು ಕನಿಷ್ಠ 10 ಜನರನ್ನು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದೂರುದಾರರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಆರೋಪಿ ಕೃಷ್ಣನ್ ತಾನು KMFನಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿಕೊಂಡು ದೂರುದಾರರಿಗೆ ಪರಿಚಯವಾಗಿದ್ದಾನೆ. KMF ನೀಡಿದ್ದಂತೆ ಕಾಣುವ ಜಾಹೀರಾತನ್ನು ತೋರಿಸಿ, ಒಂದು ಹುದ್ದೆಗೆ 10 ಲಕ್ಷ ರೂಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ಒರಿಜಿನಲ್ ಐಡಿ ಕಾರ್ಡ್ ತೋರಿಸಿ ನಂಬಿಕೆ ಗಳಿಸಿದ್ದಾನೆ. ಅಲ್ಲದೆ KMF ಹೆಸರಿನಲ್ಲಿ ಇಮೇಲ್ ಮತ್ತು OTPಗಳನ್ನು ಕಳುಹಿಸಿ “ನಿಮ್ಮ ಹೆಸರು ಸೆಲೆಕ್ಷನ್ ಲಿಸ್ಟ್‌ನಲ್ಲಿದೆ” ಎಂದು ನಂಬಿಸಿದ್ದಾನೆ.
ದೂರುದಾರರು ನಂಬಿ ಹಣ ನೀಡಿದ್ದಾರೆ. ಆದರೆ ಕೆಲಸ ಕೇಳಿದಾಗ “ಇನ್ನೂ 15 ಲಕ್ಷ ಕೊಡಿ” ಎಂದು ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಸಂಪರ್ಕಕ್ಕೆ ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ಆರೋಪಿ ಕೈಗೆ ಸಿಗದೇ ಇರುವುದು ಬಯಲಾಗಿದೆ.
ಈ ಪ್ರಕರಣದಲ್ಲಿ ಕನಿಷ್ಠ 10 ಜನರು ಮೋಸಕ್ಕೆ ಒಳಗಾಗಿದ್ದು, ಒಟ್ಟು ಕೋಟ್ಯಂತರ ರೂಪಾಯಿ ವಂಚನೆಯಾಗಿದೆ ಎಂಬ ಆರೋಪವಿದೆ. ದೂರುದಾರರು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ನೇರವಾಗಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಆರಂಭಿಸಿದ್ದಾರೆ.
ಉದ್ಯೋಗ ಆಮಿಷಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಗಮನ ಸೆಳೆದಿದೆ. ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಐಡಿ ಕಾರ್ಡ್, ಇಮೇಲ್ ಮತ್ತು ಜಾಹೀರಾತುಗಳನ್ನು ಬಳಸಿ ಮೋಸ ಮಾಡುವುದು ಹೊಸ ತಂತ್ರವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಉದ್ಯೋಗ ಹುಡುಕುವವರು ಎಚ್ಚರಿಕೆ ವಹಿಸಿ, ಅಧಿಕೃತ ಮೂಲಗಳಿಂದಲೇ ಮಾಹಿತಿ ಪಡೆಯಿರಿ ಎಂದು ಪೊಲೀಸರು ಸೂಚಿಸಿದ್ದಾರೆ. ಇಂತಹ ಮೋಸಕ್ಕೆ ಒಳಗಾದರೆ ತಕ್ಷಣ ಸೈಬರ್ ಕ್ರೈಂ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ.
ಈ ಪ್ರಕರಣದ ತನಿಕೆಯಿಂದ ಹೆಚ್ಚಿನ ವಿವರಗಳು ಬಯಲಾಗಲಿವೆ. ದೂರುದಾರರಿಗೆ ನ್ಯಾಯ ದೊರೆಯಲಿ ಎಂದು ಆಶಿಸೋಣ.





