ಬೆಂಗಳೂರು: ಕರ್ನಾಟಕದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೃದಯಾಘಾತದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್, ಶಿಕ್ಷಕಿ, ಹಿರಿಯ ರಂಗಭೂಮಿ ಕಲಾವಿದ ಹಾಗೂ ಲಾರಿ ಚಾಲಕ ಸೇರಿದ್ದಾರೆ.
ಬೇಗೂರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ನಿಜಾಮುದ್ದೀನ್ (44) ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಡುಗೋಡಿ ಪೊಲೀಸ್ ಕ್ವಾಟರ್ಸ್‌ನಲ್ಲಿ ವಾಸವಿದ್ದ ನಿಜಾಮುದ್ದೀನ್‌ಗೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುಲೋಚನಾ (49), ಶಿಕ್ಷಕಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭಕ್ತನಪಾಳ್ಯದ ಮನೆಯಲ್ಲಿ ಸುಲೋಚನಾ ಅವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಚಿ. ರಮೇಶ್ ಕಲ್ಲಡ್ಕ (68), ತುಳು ರಂಗಭೂಮಿ ಹಿರಿಯ ಕಲಾವಿದ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳಕೀರು ಮನೆಯಲ್ಲಿ ರಮೇಶ್ ಕಲ್ಲಡ್ಕ ಅವರು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ತುಳು ರಂಗಭೂಮಿಯಲ್ಲಿ ಕಲಾಸೇವೆ ಸಲ್ಲಿಸಿದ್ದ ಅವರು, ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ರಂಗಭೂಮಿ ಕ್ಷೇತ್ರದಿಂದ ಸಂತಾಪ ವ್ಯಕ್ತವಾಗಿದೆ.
ನೆಲಮಂಗಲದಲ್ಲಿ ಲಾರಿ ಚಾಲಕನಿಗೆ ಹೃದಯಾಘಾತ: ಬಿಹಾರ ಮೂಲದ ಕಲ್ಲುಸಿಂಗ್ ಸಾವು
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಇಂದು ಬಿಹಾರ ಮೂಲದ 54 ವರ್ಷದ ಲಾರಿ ಚಾಲಕ ಕಲ್ಲುಸಿಂಗ್, ಯಶವಂತಪುರದಿಂದ ದಾಬಸ್‌ಪೇಟೆಗೆ ಪೇಂಟ್ ತುಂಬಿದ ಲಾರಿಯನ್ನು ತಂದು ಅನ್‌ಲೋಡ್ ಮಾಡುವ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕಲ್ಲುಸಿಂಗ್ ದಾಬಸ್‌ಪೇಟೆಯ ಒಂದು ಕೈಗಾರಿಕಾ ಘಟಕಕ್ಕೆ ಪೇಂಟ್ ಸರಬರಾಜು ಮಾಡಲು ಲಾರಿಯಲ್ಲಿ ಬಂದಿದ್ದರು. ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಆಸ್ಪತ್ರೆಯಲ್ಲೇ ನಡೆಸಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಅಕಾಲಿಕ ಮರಣ (UDR) ಪ್ರಕರಣ ದಾಖಲಾಗಿದೆ.