ಕರ್ನಾಟಕದ ಡಿಫೆನ್ಸ್ ಕಾರಿಡಾರ್‌ ಸಂಬಂಧ ಶೀಘ್ರದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

Add a heading (64)

ಬೆಂಗಳೂರು: ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ವಿಜಯಪುರ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರಾತಿಗಾಗಿ ಸಲ್ಲಿಸಿದ ಮನವಿಗೆ ಸಕಾರಾತ್ಮಕ ಫಲಿತಾಂಶ ದೊರೆತಿದೆ. ಈ ಸಂಬಂಧ ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಪಾಟೀಲ ಹೇಳಿದ್ದಾರೆ. ಈ ವಿಷಯವು ಕೇಂದ್ರ ಸಂಪುಟದಲ್ಲಿ ಚರ್ಚೆಗೆ ಬಂದ ನಂತರ ಅಂತಿಮ ಒಪ್ಪಿಗೆ ದೊರೆಯಲಿದೆ.

ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ಸಂಘರ್ಷದಂತಹ ಜಾಗತಿಕ ರಾಜಕೀಯ ಬದಲಾವಣೆಗಳಿಂದಾಗಿ ರಕ್ಷಣಾ ಉದ್ಯಮ, ಏರೋಸ್ಪೇಸ್, ಸೆಮಿಕಂಡಕ್ಟರ್, ಮತ್ತು ಎಐ ಆಧಾರಿತ ಡೀಪ್-ಟೆಕ್ ಉದ್ಯಮಗಳಿಗೆ ಮುಂದಿನ 20 ವರ್ಷಗಳ ಕಾಲ ಭಾರೀ ಬೇಡಿಕೆ ಇರಲಿದೆ. ಎನ್‌ವಿಡಿಯಾ ಕಂಪನಿಯು ಈ ಕ್ಷೇತ್ರದಲ್ಲಿ 4 ಟ್ರಿಲಿಯನ್ ಡಾಲರ್ ವಹಿವಾಟಿನೊಂದಿಗೆ ಪ್ರಪ್ರಥಮ ಸ್ಥಾನ ಪಡೆದಿದೆ. ಈ ಸದವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಸಿದ್ಧತೆ ನಡೆಸಬೇಕಿದೆ,” ಎಂದು ತಿಳಿಸಿದರು.

ದೇವನಹಳ್ಳಿಯಲ್ಲಿ ಹೈಟೆಕ್ ಡಿಫೆನ್ಸ್ ಪಾರ್ಕ್

ದೇವನಹಳ್ಳಿ ಸಮೀಪ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಭೂಮಿ ಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ಸಭೆ ಕರೆದಿದ್ದಾರೆ. “ರೈತರಿಗೆ ಸರಿಯಾದ ಪರಿಹಾರ ನೀಡುವುದು ನಮ್ಮ ಆದ್ಯತೆ. ರೈತರು ಕೂಡ ನಮ್ಮ ಸಮಾಜದ ಭಾಗವೇ ಆಗಿದ್ದಾರೆ,” ಎಂದು ಸಚಿವ ಎಂ ಬಿ ಪಾಟೀಲ ಒತ್ತಿ ಹೇಳಿದರು.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಮುಂದಿನ ವಾರ ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. “ನೋಯಿಡಾ ಮತ್ತು ನವೀ ಮುಂಬೈನ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಗಮನಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದರು.

ಈ ಸಂದರ್ಭದಲ್ಲಿ, ರಾಜ್ಯದ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಪಾಟೀಲ ಸ್ಪಷ್ಟನೆ ನೀಡಿದರು. “ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಯಾಗಲಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಾಗಲಿ ಖಾಲಿಯಿಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ನಿರ್ಧಾರವೇ ಅಂತಿಮ. ಈ ಬಗ್ಗೆ ಯಾವುದೇ ಗೊಂದಲವಿಲ್ಲ,” ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.

Exit mobile version