ಇಂದಿನಿಂದ 2 ವಾರ ವಿಧಾನಮಂಡಲ ಅಧಿವೇಶನ: ಸರ್ಕಾರಕ್ಕೆ ಚಾಟಿ ಬೀಸಲು ಬಿಜೆಪಿ-ಜೆಡಿಎಸ್ ಸಜ್ಜು!

Untitled design (95)

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಇಂದಿನಿಂದ ಹೊಸ ಅಧ್ಯಾಯ ಆರಂಭವಾಗಲಿದೆ. ಮಳೆಗಾಲದ ವಿಧಾನಮಂಡಲ ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದ್ದು, ಆಗಸ್ಟ್ 22ರವರೆಗೆ ಎರಡು ವಾರಗಳ ಕಾಲ ನಡೆಯಲಿದೆ. ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ನಂತರ ಪ್ರಾರಂಭವಾಗುತ್ತಿರುವ ಈ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಸಮರ ನಡೆಯುವ ಸಾಧ್ಯತೆ ದಟ್ಟವಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಹಲವು ರಣತಂತ್ರಗಳನ್ನು ರೂಪಿಸಿವೆ, ಇದರಿಂದ ಅಧಿವೇಶನದ ವಾಕ್ಸಮರ ಕಾವೇರಲಿದೆ.

ಹೌದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಬಿಡಲಿರುವ ಪ್ರಮುಖ ಅಸ್ತ್ರಗಳು ಯಾವುವು? ಮೊದಲನೆಯದಾಗಿ, ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ 11 ಅಮಾಯಕರ ಸಾವು. ಇದರಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ಸರ್ಕಾರದ ದ್ವಂದ್ವ ನಿರ್ಧಾರಗಳನ್ನು ಪ್ರಶ್ನಿಸಿ ಬಿಜೆಪಿ ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ರೈತರಿಗೆ ಯೂರಿಯಾ ಕೊರತೆಯ ಸಮಸ್ಯೆಯೂ ಚರ್ಚೆಗೆ ಬರಲಿದ್ದು, ಇದು ಜಟಾಪಟಿಗೆ ಕಾರಣವಾಗಬಹುದು. ಇದಲ್ಲದೆ, ಗುತ್ತಿಗೆದಾರರಿಂದ 60% ವಸೂಲಿ ಆರೋಪ, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪಗಳು ಸದ್ದು ಮಾಡಲಿವೆ.

ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಆರೋಪವೂ ಅಧಿವೇಶನದಲ್ಲಿ ತೀವ್ರ ಚರ್ಚೆಗೆ ಗುರಿಯಾಗಲಿದೆ. ಇದರೊಂದಿಗೆ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದ್ದು, ಇದು ಮತ್ತಷ್ಟು ವಾಕ್ಸಮರಕ್ಕೆ ಎಡೆಮಾಡಿಕೊಡಲಿದೆ.

ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮನ್ವಯ ಸಭೆಯು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದು, ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂದು ಬೆಳಗ್ಗೆ 10:30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಉಭಯ ಪಕ್ಷಗಳ ಶಾಸಕರು ಮತ್ತು ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿದಿನ ಒಂದೊಂದು ವಿಚಾರವನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆ ರೂಪಿಸಲಾಗಿದೆ. ರೈತರ ಸಮಸ್ಯೆಗಳು, ಉತ್ತರ ಕರ್ನಾಟಕಕ್ಕೆ ಅನ್ಯಾಯ, ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಧ್ವನಿ ಎತ್ತುವುದಾಗಿ ನಾಯಕರು ಘೋಷಿಸಿದ್ದಾರೆ.

ಇದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ‘ಮತಗಳ್ಳತನ’ ಆರೋಪಗಳಿಗೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರದಿಂದ ಅನುದಾನದಲ್ಲಿ ತಾರತಮ್ಯ ಮತ್ತು ಇತರ ವಿಚಾರಗಳನ್ನು ಮುಂದಿಟ್ಟು ಕೌಂಟರ್ ನೀಡಲಿದೆ. ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡಿದ್ದರೆ, ಕಾಂಗ್ರೆಸ್ ಅದನ್ನು ಪಕ್ಷದ ಮುಜುಗರವಾಗಿ ಪರಿಗಣಿಸಿದೆ.

ಒಟ್ಟಾರೆಯಾಗಿ, ಅಧಿವೇಶನದಲ್ಲಿ 27 ವಿಧೇಯಕಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ, ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ, ಫೇಕ್ ನ್ಯೂಸ್ ನಿರ್ಬಂಧಕ ವಿಧೇಯಕ, ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕಗಳು ಸೇರಿವೆ. ಮಂಗಳವಾರದ ಸದನ ಸಲಹಾ ಸಮಿತಿಯಲ್ಲಿ ಈ ಪಟ್ಟಿಯನ್ನು ಮಂಡಿಸಲಾಗುವುದು. ವಿಪಕ್ಷಗಳ ಒಗ್ಗಟ್ಟು ಮತ್ತು ಸರ್ಕಾರದ ತಂತ್ರಗಳ ನಡುವೆ ಈ ಅಧಿವೇಶನ ರಾಜಕೀಯ ಕಾವನ್ನು ಹೆಚ್ಚಿಸಲಿದೆ.

Exit mobile version