ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತ ದೇಹಗಳನ್ನು ಹೂತಿಟ್ಟ ಆರೋಪದ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. 1986ರಲ್ಲಿ ಅಸಹಜ ಸಾವನ್ನಪ್ಪಿದ ಬೋಳಿಯಾರು ಗ್ರಾಮದ ಪದ್ಮಲತಾ ಅವರ ಕುಟುಂಬ ಸದಸ್ಯರು ಇಂದು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಾಜರಾಗಿ, ಹಳೇ ಕೇಸ್ ಮರುತನಿಖೆಗೆ ಒತ್ತಾಯಿಸಿದ್ದಾರೆ. ಈ ಪ್ರಕರಣವು ಧರ್ಮಸ್ಥಳದ ಇತ್ತೀಚಿನ ಶವ ಹೂತ ಆರೋಪಗಳೊಂದಿಗೆ ಸಂಬಂಧ ಹೊಂದಿದ್ದು, ಕುಟುಂಬದ ಈ ಹೆಜ್ಜೆಯಿಂದ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ.
ಪದ್ಮಲತಾ ಅವರು 1986ರ ಡಿಸೆಂಬರ್ 22ರಂದು ಕಾಣೆಯಾಗಿದ್ದರು. 56 ದಿನಗಳ ಬಳಿಕ 1987ರಲ್ಲಿ ಅವರ ಮೃತದೇಹ ಅಸಹಜ ಸ್ಥಿತಿಯಲ್ಲಿ ಸಿಕ್ಕಿತ್ತು. ಆಗ ಸಿಐಡಿ ತನಿಖೆ ನಡೆಸಿದರೂ, ಕೇಸ್ ಪತ್ತೆಯಾಗದೆ ಕ್ಲೀನ್ ಚಿಟ್ ನೀಡಲಾಗಿತ್ತು. ಆದರೆ, ಇದೀಗ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಆರೋಪದ ಹಿನ್ನೆಲೆಯಲ್ಲಿ ಪದ್ಮಲತಾ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಎಸ್‌ಐಟಿ ತನಿಖೆಯಲ್ಲಿ ಗುರುತಿಸಲಾದ 15ನೇ ಸ್ಪಾಟ್ ಪದ್ಮಲತಾ ಮನೆ ಸಮೀಪದಲ್ಲಿರುವುದು ಈ ಸಂಬಂಧವನ್ನು ಬಲಪಡಿಸಿದೆ.
ಪದ್ಮಲತಾ ಅವರ ಸಹೋದರಿ ಇಂದ್ರವತಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನನ್ನ ತಂಗಿಯ ಕೊಲೆಯಾಗಿ 39 ವರ್ಷಗಳಾಗಿವೆ. ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲ. ಸಿಐಡಿ ಅಧಿಕಾರಿಗಳು ಪತ್ತೆ ಮಾಡಲಾಗದ ಕೇಸ್ ಎಂದು ಹಿಂಬರಹ ಕೊಟ್ಟರು. ಆದರೆ ನಾವು ನ್ಯಾಯ ಬಯಸುತ್ತೇವೆ. ಕೊಲೆಗಾರರನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು,” ಎಂದು ದೂರು ನೀಡಿದ್ದಾರೆ. ಕುಟುಂಬ ಸದಸ್ಯರು ಎಸ್‌ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ, ಮರುತನಿಖೆಗೆ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಈಗಾಗಲೇ ಹಲವು ಸ್ಪಾಟ್‌ಗಳನ್ನು ಗುರುತಿಸಿ ಉತ್ಖನನ ನಡೆಸುತ್ತಿದ್ದು, ಪದ್ಮಲತಾ ಕೇಸ್ ಅದರೊಂದಿಗೆ ಸಂಬಂಧ ಹೊಂದಿರುವುದು ತನಿಖೆಯನ್ನು ತೀವ್ರಗೊಳಿಸಿದೆ. ಅಧಿಕಾರಿಗಳು ಈ ದೂರನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಘಟನೆಯು 1980ರ ದಶಕದ ಹಳೇ ಕೇಸ್‌ಗಳನ್ನು ಮರುಜೀವಿಸುವಂತೆ ಮಾಡಿದೆ.