ಮನಸೂರೆಗೊಂಡ ಮಕ್ಕಳ ಕಲಾ ಕಲರವ ಯಕ್ಷಗಾನದ ಗತ್ತು, ಭಾವ,ಭಕ್ತಿ,ಜಾನಪದ ಗೀತೆಗಳ ಗಾಯನದ ಜೊತೆ ನಾಟಕದ ಸಂಪತ್ತು,ಹಲವಾರು ನೃತ್ಯಗಳ ಗಮ್ಮತ್ತು, ಕರಾಟೆಯ ಕಸರತ್ತು ಈ ಎಲ್ಲಾ ಕಲಾಸ್ವತ್ತುಗಳ ಸುಂದರ ಜಗತ್ತು ನಿನ್ನೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನಿನ್ನೆ ಸಂಜೆ(೧೧-೦೫-೨೫) ಹಮ್ಮಿಕೊಂಡ ಕಲಾವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿತಗೊಂಡು ನೆರೆದ ಪೋಷಕರ ಹಾಗೂ ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪ್ರಾಪ್ತವಾಯಿತು.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸಿದ್ಧ ಸಾಹಿತಿಗಳಾದ ಶ್ರೀ ಎಮ್ ಆರ್ ದತ್ತಾತ್ರಿಯವರು ಮಾತನಾಡುತ್ತ ಕೇವಲ ೨೦ ದಿನಗಳಲ್ಲಿ ಮಕ್ಕಳನ್ನು ಈ ಒಂದು ಕಲೆಗಳಲ್ಲಿ ತೊಡಗಿಸಿ ಆ ಎಲ್ಲಾ ಚಟುವಟಿಕೆಗಳನ್ನು ವೇದಿಕೆಯ ಮೇಲೆ ತುಂಬಾ ಅಚ್ಚುಕಟ್ಟಾಗಿ ಪ್ರದರ್ಶಿಸುವಂತೆ ಮಾಡಿದ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಈ ಕಾರ್ಯವನ್ನು ಮೆಚ್ಚಲೇ ಬೇಕು ಎಂದು ಪ್ರಶಂಸಿದರು.
ಮತ್ತೊಬ್ಬ ಅತಿಥಿ ಜನಪ್ರಿಯ ಸಂಗೀತ ನಿರ್ದೇಶಕರಾದ ಉಪಾಸನ ಮೋಹನ್ ಮಕ್ಕಳ ವಿದ್ಯಾಭ್ಯಾಸದ ಜೊತೆಯಲ್ಲಿ ನಮ್ಮ ಪಾರಂಪರಿಕ ಕಲೆಗಳನ್ನು ತಿಳಿಸಿ ಕೊಡುವ ಕಲಿಸುವ ಪ್ರಯತ್ನಗಳಾಗ ಬೇಕು ಆ ಕೆಲಸವನ್ನು ಕಲಾಕದಂಬ ಸಂಸ್ಥೆಯು ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಶ್ರೀ ಸಿದ್ಧಿಗಣಪತಿ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ,ಕಲಾಕದಂಬದ ಗೌರವ ಅಧ್ಯಕ್ಷರಾದ ದೇವರಾಜ ಕರಬ ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ಕಲಾಕದಂಬದ ಕಾರ್ಯದರ್ಶಿ ಮುರಳೀಧರ ನಾವಡ ಯಶಸ್ವೀಯಾಗಿ ನಿಭಾಯಿಸಿದರು. ಮಮತ ಉರಾಳ,ಅದಿತಿ ಉರಾಳ,ಪೂಜಾ ಆಚಾರ್ಯ,ನಿತ್ಯಾ ಗೌಡ, ನಂದಕುಮಾರ್,ರಮೇಶ್ ದೊರೆ,ಸುರೇಶ್,ತೇಜಸ್ ಗೌಡ,ವಿನೋದ್, ರಾಜೇಶ್, ಕಾರ್ತಿಕ್,ರುತ್ವಿಕ್,ವಾಸುದೇವ ಸೋಮಯಾಜಿ,ಶ್ರೀಕಲಾ ಸೋಮಯಾಜಿ ಹಾಗೂ ಗುರುರಾಜ್ ಗೌಡ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.