ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಲಬುರಗಿಯ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯ ವೇಳೆ ಒಣಗಿದ ತೊಗರಿ ಬೆಳೆಯನ್ನು ತಂದು ತೋರಿಸಿದ ರೈತನಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರೈತನ ಬೆಳೆ 4 ಎಕರೆಯಲ್ಲಿ ಒಣಗಿರುವುದಕ್ಕೆ ತಮ್ಮ 40 ಎಕರೆ ಬೆಳೆಯ ಸಮಸ್ಯೆಯನ್ನು ಹೋಲಿಕೆ ಮಾಡಿ, “6 ಹಡೆದವಳ ಮುಂದೆ 3 ಹಡೆದವಳು ಬಂದು ಹೇಳಿದಂಗಾಯಿತು” ಎಂದು ಖರ್ಗೆ ಗರಂ ಆಗಿದ್ದಾರೆ.
ಕಲಬುರಗಿಯಲ್ಲಿ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಒಬ್ಬ ರೈತ ತನ್ನ ಒಣಗಿದ ತೊಗರಿ ಬೆಳೆಯನ್ನು ತಂದು ಖರ್ಗೆ ಅವರಿಗೆ ತೋರಿಸಿ, ತನ್ನ ಹೊಲದ ಬೆಳೆ ಹಾಳಾಗಿದೆ ಎಂದು ದೂರಿದ. ಇದಕ್ಕೆ ಖರ್ಗೆ, “ನೀನು ಎಷ್ಟು ಎಕರೆಯಲ್ಲಿ ತೊಗರಿ ಬಿತ್ತಿದ್ದೀಯಾ?” ಎಂದು ಕೇಳಿದಾಗ, ರೈತ 4 ಎಕರೆ ಎಂದು ಉತ್ತರಿಸಿದ. ಇದಕ್ಕೆ ಖರ್ಗೆ, “ನಿನ್ನದು ಕೇವಲ 4 ಎಕರೆ, ನನ್ನದು 40 ಎಕರೆಯಲ್ಲಿ ತೊಗರಿ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಎಲ್ಲವೂ ಹಾಳಾಗಿದೆ. ನೀನು ಸಸ್ಟೈನ್ ಮಾಡಿಕೊಳ್ಳಬಹುದು, ನನಗೆ ಆಗಲ್ಲ. 6 ಹಡೆದವಳ ಮುಂದೆ 3 ಹಡೆದವಳು ಬಂದು ಹೇಳಿದಂಗಾಯಿತು!” ಎಂದು ತಿರುಗೇಟು ನೀಡಿದರು. ಈ ವೇಳೆ ಸುತ್ತಲಿನ ಜನರು ನಕ್ಕಿದ್ದಾರೆ.
ಖರ್ಗೆ ರೈತನಿಗೆ, “ಪ್ರಚಾರಕ್ಕಾಗಿ ಇಲ್ಲಿಗೆ ಬರಬೇಡ” ಎಂದು ಸಲಹೆ ನೀಡಿದರು. ತಮ್ಮ 40 ಎಕರೆಯಲ್ಲಿ ಬೆಳೆದ ಬೆಳೆಗಳೆಲ್ಲವೂ ಹಾಳಾಗಿರುವುದರಿಂದ ತಾವೇ ದೊಡ್ಡ ಸಂಕಷ್ಟದಲ್ಲಿದ್ದೇವೆ ಎಂದು ಖರ್ಗೆ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. “ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಬೆಳೆ ಹಾನಿಯ ಬಗ್ಗೆ ಗಂಭೀರವಾಗಿಲ್ಲ. ಕೆಲವೆಡೆ ಅತಿವೃಷ್ಟಿ, ಕೆಲವೆಡೆ ಮಳೆ ಕೊರತೆ, ಪ್ರವಾಹದಿಂದ ದೇಶಾದ್ಯಂತ ಬೆಳೆ ಹಾಳಾಗಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಇದರ ಕಾಳಜಿಯಿಲ್ಲ” ಎಂದು ಖರ್ಗೆ ಟೀಕಿಸಿದರು.





