ಕಲಬುರಗಿಯಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಬೆಳಗಿನ ಜಾವ ನಡೆದಿದೆ. ಈ ಹಿಂದೆ ಎಟಿಎಂನಿಂದ 18 ಲಕ್ಷ ರೂಪಾಯಿ ದೋಚಿದ್ದ ಆರೋಪಿಗಳೇ ಮತ್ತೆ ಕಳ್ಳತನಕ್ಕೆ ಯತ್ನಿಸಿದ್ದರು.
ಈ ತಿಂಗಳ 9ನೇ ತಾರೀಖಿನಂದು ಕಲಬುರಗಿಯ ಪೂಜಾರಿ ಚೌಕ್ ಬಳಿ ಎಟಿಎಂ ದರೋಡೆ ಮಾಡಿದ್ದ ತಸ್ಲಿಂ(28) ಮತ್ತು ಶರೀಫ್(22), ಇಂದು ಮತ್ತೊಂದು ಎಟಿಎಂ ದರೋಡೆಗೆ ಹೊಂಚು ಹಾಕಿ ಕುಳಿತಿದ್ದರು. ಆದರೆ, ಪೊಲೀಸರಿಗೆ ಮಾಹಿತಿ ತಿಳಿದು, ಘಟನಾ ಸ್ಥಳಕ್ಕೆ ತೆರಳಿದ ಸಬ್ ಅರ್ಬನ್ ಠಾಣೆಯ ಪಿಎಸ್‌ಐ ಬಸವರಾಜ್ ತಂಡ ಆರೋಪಿಗಳನ್ನು ಎದುರಿಸಿತು.
ಆರೋಪಿಗಳು ಶರಣಾಗದೆ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದರು. ಆತ್ಮರಕ್ಷಣೆಗಾಗಿ ಪಿಎಸ್‌ಐ ಬಸವರಾಜ್ ಗುಂಡಿನ ದಾಳಿ ನಡೆಸಿದರು. ಈ ಫೈರಿಂಗ್‌ನಲ್ಲಿ ಇಬ್ಬರು ಆರೋಪಿಗಳಾದ ತಸ್ಲಿಂ ಮತ್ತು ಶರೀಫ್ ಗಾಯಗೊಂಡಿದ್ದಾರೆ.
ಗಾಯಗೊಂಡ ಆರೋಪಿಗಳನ್ನು ಕಲಬುರಗಿಯ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.