ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದ ಬಿಎಲ್‌ಡಿಇ ಕಾಲೇಜಿನ ಹಿಂಭಾಗದಲ್ಲಿ ಹುಡುಗಿಯನ್ನು ಚುಡಾಯಿಸಿದ್ದೀಯಾ” ಎಂದು ಆರೋಪಿಸಿ, ಸೆಪ್ಟೆಂಬರ್ 7ರಂದು ಶಂಭು ಎಂಬ ಯುವಕನ ಮೇಲೆ ಐದಾರು ಜನರ ಗುಂಪೊಂದು ಕಬ್ಬಿಣದ ಪಟ್ಟಿ ಮತ್ತು ಪಾನಾದಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹುಲ್ಯಾಳ ಗ್ರಾಮದ ಶಂಭು ಎಂಬ ಯುವಕನ ಮೇಲೆ “ಹುಡುಗಿಯನ್ನು ಚುಡಾಯಿಸಿದ್ದೀಯಾ” ಎಂದು ಆರೋಪಿಸಿ ಈ ಗುಂಪು ದಾಳಿ ಮಾಡಿದೆ. ಯುವಕನ ಬೆನ್ನು, ಕೈಕಾಲುಗಳ ಮೇಲೆ ಕಬ್ಬಿಣದ ಪಟ್ಟಿಯಿಂದ ಗಾಯಗೊಳಿಸಲಾಗಿದ್ದು, ಮೈತುಂಬಾ ಬಾಸುಂಡೆಗಳಾಗಿವೆ. ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಶಂಭು ಪರಿಪರಿಯಾಗಿ ಬೇಡಿಕೊಂಡರೂ, ದಾಳಿಕೋರರು ಕರುಣೆ ತೋರದೇ ಕ್ರೂರವಾಗಿ ಥಳಿಸಿದ್ದಾರೆ.
ಹಲ್ಲೆಗೊಳಗಾದ ಶಂಭು ಸ್ವತಃ ಜಮಖಂಡಿ ನಗರ ಪೊಲೀಸ್ ಠಾಣೆಗೆ ತೆರಳಿ, ಆರೋಪಿಗಳಾದ ನರಸಿಂಹ, ಈಶ್ವರ, ಶ್ರೀಶೈಲ, ಮಲ್ಲಪ್ಪ, ಮತ್ತು ಬಸು ಅಟ್ಟೆಪ್ಪನವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಕೇಸ್ ದಾಖಲಾದ ಬಳಿಕ ಆರೋಪಿಗಳು ಶಂಭು ಮೇಲೆ ಒತ್ತಡ ಹೇರಿ, ಕೇಸ್ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳು, “ನಿನ್ನ ಮೇಲೆ ತಪ್ಪಾಗಿ ಹಲ್ಲೆ ಮಾಡಿದ್ದೇವೆ, ಚುಡಾಯಿಸಿದವನು ಬೇರೊಬ್ಬನು” ಎಂದು ಹೇಳಿದ್ದಾರೆ ಎಂದು ಶಂಭು ತಿಳಿಸಿದ್ದಾರೆ.
ಈ ಘಟನೆಯಿಂದ ಕೋಪಗೊಂಡಿರುವ ಶಂಭು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ.
 
			





 
                             
                             
                             
                             
                            