ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಪತಿ ನಿಂಗಪ್ಪನನ್ನು ಕೊಲೆ ಮಾಡಿ, ಪ್ರಿಯಕರನ ಜತೆ ಕೇರಳಕ್ಕೆ ಪರಾರಿಯಾಗಿದ್ದ ಪತ್ನಿ ಲಕ್ಷ್ಮೀ (38) ಸೇರಿದಂತೆ ಮೂವರು ಆರೋಪಿಗಳನ್ನು ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ತಿಪ್ಪೇಶ್ ನಾಯ್ಕ್ (42) ಮತ್ತು ಸಂತೋಷ್ (40) ಕೂಡ ಜೈಲು ಸೇರಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯ ನಿವಾಸಿ ಲಕ್ಷ್ಮೀ ಮತ್ತು ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ನಿಂಗಪ್ಪ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ದಂಪತಿಗೆ ಮಕ್ಕಳಿರಲಿಲ್ಲ. ಮಕ್ಕಳ ಭಾಗ್ಯಕ್ಕಾಗಿ ಲಕ್ಷ್ಮೀ ದೇವಾಲಯಗಳಿಗೆ ಭೇಟಿ ನೀಡಿದ್ದರು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಕೊನೆಗೆ, ನಿಂಗಪ್ಪನಿಗೆ ಮಕ್ಕಳಾಗುವ ಯೋಗವಿಲ್ಲ ಎಂದು ತಿಳಿದುಬಂದಿತು.
ನಿಂಗಪ್ಪ ಅಡಿಕೆ ಕೆಲಸ ಮಾಡುತ್ತಿದ್ದಾಗ, ಆತನ ಸ್ನೇಹಿತರಾದ ತಿಪ್ಪೇಶ್ ನಾಯ್ಕ್ ಮತ್ತು ಸಂತೋಷ್ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಈ ವೇಳೆ ತಿಪ್ಪೇಶ್ ನಾಯ್ಕ್‌ಗೆ ಲಕ್ಷ್ಮೀಯ ಪರಿಚಯವಾಗಿ, ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆಯಿತು, ಇದು ಅನೈತಿಕ ಸಂಬಂಧಕ್ಕೆ ಕಾರಣವಾಯಿತು. ಈ ಸಂಬಂಧದಿಂದ ಲಕ್ಷ್ಮೀ ಗರ್ಭಿಣಿಯಾದಳು.
ಕೊಲೆಗೆ ಸಂಚು ರೂಪಿಸಿದ್ದೇಗೆ?
ತನಗೆ ಮಕ್ಕಳಾಗುವ ಯೋಗವಿಲ್ಲದಿದ್ದರೂ ಲಕ್ಷ್ಮೀ ಗರ್ಭಿಣಿಯಾದದ್ದನ್ನು ಗಮನಿಸಿದ ನಿಂಗಪ್ಪ, ಅನುಮಾನದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದನು. ಇದರಿಂದ ಕೋಪಗೊಂಡ ಲಕ್ಷ್ಮೀ, ಪತಿಯನ್ನು ಕೊಲೆ ಮಾಡಲು ತಿಪ್ಪೇಶ್ ನಾಯ್ಕ್ ಜತೆ ಸಂಚು ರೂಪಿಸಿದಳು.
2024ರ ಜನವರಿ 18ರಂದು, ಲಕ್ಷ್ಮೀ ಮತ್ತು ತಿಪ್ಪೇಶ್, ನಿಂಗಪ್ಪನನ್ನು ಪಾರ್ಟಿ ಮಾಡುವ ನೆಪದಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೆ ಕರೆದೊಯ್ದರು. ಅಲ್ಲಿ ಆತನಿಗೆ ಕಂಠಪೂರ್ತಿ ಮದ್ಯ ಸೇವಿಸುವಂತೆ ಮಾಡಿ, ಮದ್ಯದ ನಶೆಯಲ್ಲಿದ್ದ ನಿಂಗಪ್ಪನನ್ನು ಬಸವಾಪುರ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ತಳ್ಳಿದರು. ಬಳಿಕ, ಲಕ್ಷ್ಮೀ ಚನ್ನಗಿರಿ ಪೊಲೀಸ್ ಠಾಣೆಗೆ ಹೋಗಿ, “ನಿಂಗಪ್ಪ ಭದ್ರಾ ಕಾಲುವೆಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ” ಎಂದು ದೂರು ದಾಖಲಿಸಿದಳು.
ಪೊಲೀಸರು ಭದ್ರಾ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿದರೂ ನಿಂಗಪ್ಪನ ಶವ ಪತ್ತೆಯಾಗಲಿಲ್ಲ. ಇದಾದ ಬಳಿಕ, ಲಕ್ಷ್ಮೀ ತನ್ನ ತವರು ಮನೆಗೆ ತೆರಳಿದಳು. ತಿಪ್ಪೇಶ್ ನಾಯ್ಕ್ ಕೇರಳಕ್ಕೆ ತೆರಳಿ ಅಲ್ಲಿ ಸ್ಥಿರವಾದನು ಮತ್ತು ಲಕ್ಷ್ಮೀಯನ್ನು ಕರೆಸಿಕೊಂಡನು. ಲಕ್ಷ್ಮೀ ತವರು ಮನೆಯವರಿಗೆ ತಿಳಿಸದೆ ಕೇರಳಕ್ಕೆ ಹೋದಾಗ, ಆಕೆಯ ಕಾಣೆಯಾದ ಬಗ್ಗೆ ತವರು ಮನೆಯವರು ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದರು.
ಲಕ್ಷ್ಮೀಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ತಿಪ್ಪೇಶ್‌ನ ಸ್ನೇಹಿತ ಸಂತೋಷ್‌ನನ್ನು ವಿಚಾರಣೆಗೆ ಕರೆದಾಗ, ಆತ ಲಕ್ಷ್ಮೀ ಮತ್ತು ತಿಪ್ಪೇಶ್‌ನ ಅನೈತಿಕ ಸಂಬಂಧದ ಬಗ್ಗೆ ಒಪ್ಪಿಕೊಂಡನು. ಲಕ್ಷ್ಮೀ ಗರ್ಭಿಣಿಯಾದಾಗ ನಿಂಗಪ್ಪ ಗರ್ಭಪಾತ ಮಾಡಿಸಿದ್ದರಿಂದ ಕೋಪಗೊಂಡು, ತಿಪ್ಪೇಶ್ ಜತೆ ಸೇರಿ ಆಕೆ ಕೊಲೆಯನ್ನು ಯೋಜಿಸಿದ್ದಳು ಎಂದು ತಿಳಿಸಿದನು.
ಆರೋಪಿಗಳ ಬಂಧನ:
ಒಂದು ವರ್ಷದ ಹಿಂದೆ ಚನ್ನಗಿರಿ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವು ಕೊಲೆ ಎಂದು ದೃಢಪಟ್ಟಿದೆ. ಲಕ್ಷ್ಮೀ, ತಿಪ್ಪೇಶ್ ನಾಯ್ಕ್, ಮತ್ತು ಸಂತೋಷ್‌ರನ್ನು ಬಂಧಿಸಲಾಗಿದ್ದು, ಆರೋಪಿಗಳು ತಮ್ಮ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.