ಬೆಂಗಳೂರು: ಕಷ್ಟದಲ್ಲಿದ್ದೇನೆಂದು ನೆರೆಯವನೆಂದು ನಂಬಿ ಯುವತಿಯೊಬ್ಬಳು 3.71 ಲಕ್ಷ ರೂಪಾಯಿ ಸಾಲ ಮಾಡಿಸಿಕೊಟ್ಟಿದ್ದಾಳೆ. ಆದರೆ, ಹಣ ವಾಪಸ್ ಕೇಳಿದಾಗ ಆರೋಪಿಯು ಆಕೆಯನ್ನು ವಂಚಿಸಿದ್ದಲ್ಲದೇ, “ರೇಪ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಬೆಂಗಳೂರಿನ ಹೆಣ್ಣೂರು (Hennuru) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಚಾರ್ಲ್ಸ್ ರಿಚರ್ಡ್ಸ್ ಎಂದು ಗುರುತಿಸಲಾಗಿದೆ. ಈತನ ಜೊತೆಗೆ ಆ್ಯಂಡ್ರೂ ಅಗಾಸಿ ಎಂಬಾತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಚಾರ್ಲ್ಸ್ ರಿಚರ್ಡ್ಸ್ ಎಂಬಾತ ಯುವತಿಯ ಪಕ್ಕದ ಮನೆಯವನಾಗಿದ್ದು, ಕಷ್ಟದಲ್ಲಿದ್ದೇನೆ ಎಂದು ಆಕೆಯನ್ನು ಮನವೊಲಿಸಿ, ಆಕೆಯ ಹೆಸರಿನಲ್ಲಿ 3.71 ಲಕ್ಷ ರೂಪಾಯಿ ಸಾಲವನ್ನು ಮಾಡಿಸಿದ್ದಾನೆ. ಈ ಪೈಕಿ 2.71 ಲಕ್ಷ ರೂಪಾಯಿಯನ್ನು ತಾನು ಪಡೆದುಕೊಂಡು, ಉಳಿದ ಮೊತ್ತವನ್ನು EMI ಮೂಲಕ ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ.
ಮೊದಲ ಎರಡು ತಿಂಗಳು ಸಕಾಲಕ್ಕೆ EMI ಪಾವತಿಸಿದ ಆರೋಪಿ, ಬಳಿಕ ತನ್ನ ಅಸಲಿ ಉದ್ದೇಶವನ್ನು ಬಯಲಿಗೆಳೆದಿದ್ದಾನೆ. EMI ಪಾವತಿ ನಿಲ್ಲಿಸಿದಾಗ ಯುವತಿ ಹಣ ವಾಪಸ್ ಕೇಳಿದ್ದಾಳೆ. ಆಗ ಚಾರ್ಲ್ಸ್ ರಿಚರ್ಡ್ಸ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. “ನೀನು ನನ್ನ ಜೊತೆ ದೈಹಿಕ ಸಂಬಂಧ ಬೆಳೆಸದಿದ್ದರೆ EMI ಕಟ್ಟಲ್ಲ, ರೇಪ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಇದಲ್ಲದೇ, ಯುವತಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೆಗೆದು ಮಾರ್ಫ್ ಮಾಡಿ, ಲೈಂಗಿಕ ಕಿರುಕುಳವನ್ನು ಮುಂದುವರೆಸಿದ್ದಾನೆ. “ನೀನು ನನ್ನ ಜೊತೆ ಮಲಗದಿದ್ದರೆ, ಗೂಂಡಾಗಳಿಂದ ರೇಪ್ ಮಾಡಿಸುತ್ತೇನೆ” ಎಂದು ನಿರಂತರವಾಗಿ ಬೆದರಿಕೆಯನ್ನು ಹಾಕಿದ್ದಾನೆ.
ಕಿರುಕುಳವನ್ನು ಸಹಿಸಲಾಗದೆ, ಯುವತಿ ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿ ಚಾರ್ಲ್ಸ್ ರಿಚರ್ಡ್ಸ್ ಮತ್ತು ಆ್ಯಂಡ್ರೂ ಅಗಾಸಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ.