ಬೆಂಗಳೂರು: ಆಗಸ್ಟ್ 15ರೊಳಗೆ ಹೆಬ್ಬಾಳ ಜಂಕ್ಷನ್‌ನ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡುವ ಗುರಿಯಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್‌ನ ಅಭಿವೃದ್ಧಿ ಕಾಮಗಾರಿಗಳು ಮತ್ತು ಗಾಂಧಿಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆಗಸ್ಟ್ 15ರ ಒಳಗೆ ಸಾರ್ವಜನಿಕರ ಉಪಯೋಗಕ್ಕೆ ತೆರೆಯುವ ಉದ್ದೇಶವಿದೆ. ಕೆ.ಆರ್. ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಮುಕ್ತಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆಶಿ ತಿಳಿಸಿದ್ದಾರೆ.
ಬಿಬಿಎಂಪಿ ವಾರ್ಡ್‌ಗಳ ಮರುರಚನೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ವಾರ್ಡ್‌ಗಳ ಮರುವಿಂಗಡಣಾ ಆಯೋಗವು ವಾರ್ಡ್‌ಗಳ ಮರುರಚನೆ ಮತ್ತು ಗಡಿಗಳ ಗುರುತಿಸುವಿಕೆ ಕಾರ್ಯವನ್ನು ಶೀಘ್ರವಾಗಿ ಆರಂಭಿಸಲಿದೆ. ಈ ಆಯೋಗವು ತಾತ್ಕಾಲಿಕ ವಾರ್ಡ್‌ಗಳ ಗುರುತಿಸುವಿಕೆ, ಗಡಿಗಳ ನಿರ್ಧಾರ, ತಕರಾರು ಅರ್ಜಿಗಳ ಸ್ವೀಕಾರ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಸೆಪ್ಟೆಂಬರ್ 1, 2025ರವರೆಗೆ ಪೂರ್ಣಗೊಳಿಸಲಿದೆ. ಇದಾದ ಬಳಿಕ ಮೀಸಲಾತಿ ಪ್ರಕ್ರಿಯೆಯನ್ನು ಕೈಗೊಂಡು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕ್ರಿಯೆಗಳು ಮುಗಿದ ತಕ್ಷಣ, ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭವಾಗಲಿದೆ. ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಇ-ಖಾತೆ ಜಾಗೃತಿ ಅಭಿಯಾನ:
ಬೆಂಗಳೂರಿನಲ್ಲಿ ಸದ್ಯ 24 ಲಕ್ಷ ‘ಎ’ ಮತ್ತು ‘ಬಿ’ ಖಾತೆಗಳಿದ್ದು, 6.5 ಲಕ್ಷ ಇ-ಖಾತೆಗಳನ್ನು ಜನರು ಈಗಾಗಲೇ ತೆಗೆದುಕೊಂಡಿದ್ದಾರೆ. ಆಸ್ತಿ ವಿವರಗಳು ಆನ್‌ಲೈನ್‌ನಲ್ಲಿ ನಿಖರವಾಗಿ ದೊರೆಯುವಂತೆ ಮಾಡಲು ಮತ್ತು ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದಿರಲು, ಅಕ್ಟೋಬರ್ 22ರಿಂದ ನವೆಂಬರ್ 1ರವರೆಗೆ ಬೃಹತ್ ಇ-ಖಾತೆ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನಕ್ಕೆ ಶಿಕ್ಷಕರು, ಬೆಸ್ಕಾಂ ಬಿಲ್ ಕಲೆಕ್ಟರ್‌ಗಳು, ಮತ್ತು ಪಾಲಿಕೆ ನೌಕರರು ಭಾಗವಹಿಸಲಿದ್ದಾರೆ. ಮನೆ-ಮನೆಗೆ ತೆರಳಿ ಜನರಿಗೆ ತಿಳುವಳಿಕೆ ನೀಡಲಾಗುವುದು. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಬಹುದಾದರೂ, ಜವಾಬ್ದಾರಿಯನ್ನು ಇವರಿಗೆ ವಹಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 15ರಿಂದ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆಗೆ ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ವಿವರಗಳನ್ನು ಸಹ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆಶಿ ಹೇಳಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಸಹಾಯ:
ವಿವಿಧ ಯೋಜನೆಗಳಡಿ ಆಯ್ಕೆಯಾದ 10,000 ರಿಂದ 15,000 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು. 3,700 ಬೀದಿಬದಿ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.