ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಗ್ರಾಮದ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಸುಲಿಯುವ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಘಟನೆಯ ವಿವರ:
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಿಕೆ ಸುಲಿಯುವ ಕೆಲಸ ಮುಗಿಸಿಕೊಂಡು ಎಂಟು ಮಂದಿ ಕಾರ್ಮಿಕರು ಬೊಲೆರೊ ವಾಹನದಲ್ಲಿ ಕಲ್ಲವ್ವ ನಾಗತಿಹಳ್ಳಿಗೆ ಹಿಂದಿರುಗುತ್ತಿದ್ದರು. ಅಂದನೂರು ಗ್ರಾಮದ ಹತ್ತಿರ ಬರುತ್ತಿದ್ದಂತೆ ವಾಹನವು ಚಾಲಕನ ಹತೋಟಿ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಅತೀ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಕಿರಣ್ (25) ಮತ್ತು ಗಿರಿರಾಜ್ (46) ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅರುಣ್ (32) ಮತ್ತು ಹನುಮಂತ (32) ಅವರನ್ನು ತಕ್ಷಣವೇ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹಾಸನ: ಆಟೋ ಡಿಕ್ಕಿಯಾಗಿ ಪಾದಚಾರಿ ಸಾವು, ಚಾಲಕ ಪರಾರಿ
ಹಾಸನ: ನಗರದ ಸಾಲಗಾಮೆ ರಸ್ತೆಯ ಸುಬೇದಾರ್ ನಾಗೇಶ್ ವೃತ್ತದ ಬಳಿ ದುರ್ಘಟನೆ ನಡೆದಿದೆ. ಸಿಗ್ನಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಕಡೂರು ತಾಲೂಕಿನ ಯಗಟಿಪುರ ಮೂಲದ ರಾಜ್‌ಕುಮಾರ್ (51) ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ಹಾಸನದ ದಾಸರಕೊಪ್ಪಲಿನಲ್ಲಿ ವಾಸವಿದ್ದರು. ಅಪಘಾತ ಸಂಭವಿಸಿದ ತಕ್ಷಣ ಆಟೋ ಚಾಲಕ ವಾಹನದ ಸಮೇತ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಮದುವೆಗೂ ಮುನ್ನ ಜನಿಸಿದ ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಎಸೆದ ಘಟನೆ: ಅಜ್ಜಿ-ಮೊಮ್ಮಗಳು ಬಂಧಿತರು
ಮದುವೆಗೂ ಮೊದಲು ಜನಿಸಿದ ನವಜಾತ ಶಿಶುವನ್ನು ನಗರದ ಒಂದು ರಸ್ತೆಬದಿಯಲ್ಲಿ ಕಸದ ಜೊತೆ ಎಸೆದು ಹೋದ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯ ಬಳಿ ರಸ್ತೆಬದಿಯಲ್ಲಿ ಒಂದು ಬಟ್ಟೆಯಲ್ಲಿ ಸುತ್ತಿ ಇಡಲಾಗಿದ್ದ ನವಜಾತ ಶಿಶು ಸತ್ತ ಸ್ಥಿತಿಯಲ್ಲಿ ಸ್ಥಳೀಯರಿಂದ ಪತ್ತೆಯಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಾಗಡಿ ರಸ್ತೆ ಠಾಣಾ ಪೊಲೀಸರು ತನಿಖೆ ಪ್ರಾರಂಭಿಸಿದರು. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ತನಿಖೆಯ ಸಂದರ್ಭದಲ್ಲಿ, ಸಿಸಿ ಫುಟೇಜ್ನಲ್ಲಿ ಒಬ್ಬರು ವಯಸ್ಸಾದವರೂ ಮತ್ತೊಬ್ಬರು ಯುವತಿಯೂ, ಒಂದು ಬಟ್ಟೆಯ ಮೂಟೆಯನ್ನು ರಸ್ತೆಬದಿಯಲ್ಲಿ ಕಸದ ಜೊತೆ ಎಸೆಯುವ ದೃಶ್ಯ ಕಂಡುಬಂತು. ಈ ದೃಶ್ಯಾವಳಿಯ ಆಧಾರದ ಮೇಲೆ, ಪೊಲೀಸರು ಆ ಇಬ್ಬರು ಮಹಿಳೆಯರನ್ನು ಗುರುತಿಸಿ, ಅವರನ್ನು ಅವರನ್ನ ವಶಕ್ಕೆ ಪಡೆದಿದ್ದಾರೆ. ಇವರು ನವಜಾತ ಶಿಶುವಿನ ವಯಸ್ಸಾದ ಅಜ್ಜಿ ಮತ್ತು ಅವಳ 19 ವರ್ಷದ ಮೊಮ್ಮಗಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ:
19 ವರ್ಷದ ಯುವತಿ ಮದುವೆಗೂ ಮುನ್ನ ಒಬ್ಬ ಯುವಕನೊಂದಿಗಿನ ಸಂಬಂಧದಿಂದ ಗರ್ಭವತಿಯಾಗಿದ್ದಾಳೆ. ಮದುವೆಯಾಗದೇ ಮಗುವಾಗಿರುವುದು ಕುಟುಂಬದಲ್ಲಿ ಗಂಭೀರ ಸಮಸ್ಯೆ ಉಂಟುಮಾಡಿತ್ತು ಹೀಗಾಗಿ ಪೋಷಕರು ಈ ಸಾಮಾಜಿಕ ಕಳಂಕ ಮತ್ತು ಹಗರಣವನ್ನು ಮರೆಮಾಚಲು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.





