ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸುತ್ತಿದೆ. ಗೃಹ ಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣಕ್ಕಾಗಿ ರಾಜ್ಯದ ಮಹಿಳೆಯರು ಕಾತರದಿಂದ ಕಾಯುತ್ತಿದ್ದು, ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಸಿಹಿ ಸುದ್ದಿ ನೀಡಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಗೃಹ ಲಕ್ಷ್ಮೀ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿ ಹಣವನ್ನು ಶೀಘ್ರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಈವರೆಗೆ 21 ಕಂತುಗಳ ಹಣವನ್ನು ವಿತರಿಸಲಾಗಿದ್ದು, ಒಬ್ಬ ಫಲಾನುಭವಿಗೆ ಒಟ್ಟು ₹42,000 ಜಮಾ ಮಾಡಲಾಗಿದೆ. ಹಣ ಜಮೆಯಾದ ತಕ್ಷಣ ಮಹಿಳೆಯರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ,” ಎಂದು ತಿಳಿಸಿದರು. ಬೆಳಗಾವಿ ಜಿಲ್ಲೆಗೆ ಒಟ್ಟು ₹4,500 ಕೋಟಿ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿದೆ ಎಂದು ಅವರು ಹೇಳಿದರು.
“ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಜೂನ್ ತಿಂಗಳವರೆಗಿನ ಗೃಹ ಲಕ್ಷ್ಮೀ ಹಣವನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಆದಷ್ಟು ಬೇಗ ವಿತರಿಸುತ್ತೇವೆ,” ಎಂದು ಸಚಿವೆ ಭರವಸೆ ನೀಡಿದರು. ಈ ಯೋಜನೆಯು ರಾಜ್ಯದ ದೊಡ್ಡ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಿ ಹೇಳಿದರು.
ಕೇಂದ್ರ ಸರ್ಕಾರದಿಂದ ಶ್ಲಾಘನೆ
ಕರ್ನಾಟಕ ಸರ್ಕಾರದ ಪೂರ್ವ ಪ್ರಾಥಮಿಕ ಶಿಕ್ಷಣ ಮಾದರಿಯನ್ನು ಕೇಂದ್ರ ಸರ್ಕಾರವೂ ಶ್ಲಾಘಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. “ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯವೈಖರಿಯನ್ನು ಕೇಂದ್ರವು ಮೆಚ್ಚಿಕೊಂಡಿದೆ. ಈ ಇಲಾಖೆಯು ಜನರ ಜೀವನಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ,” ಎಂದು ಅವರು ಹೇಳಿದರು. ಮಕ್ಕಳ ಶಿಕ್ಷಣ, ಪೌಷ್ಟಿಕಾಂಶ, ಮಹಿಳಾ ಕಲ್ಯಾಣ, ಬಾಲ್ಯ ವಿವಾಹ ನಿರ್ಮೂಲನೆ, ಪೋಕ್ಸೋ ಪ್ರಕರಣಗಳು, ಮತ್ತು ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ.
ಅಂಗನವಾಡಿ ಸುವರ್ಣ ಮಹೋತ್ಸವ
ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ನವೆಂಬರ್ 19ರಂದು ಬೆಂಗಳೂರಿನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ದಿನವೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ‘ಅಕ್ಕಾ ಪಡೆ’ಗೆ ಚಾಲನೆ ನೀಡಲಾಗುವುದು. ಮೈಸೂರು, ಉಡುಪಿ, ಮತ್ತು ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ‘ಅಕ್ಕಾ ಪಡೆ’ ಜಾರಿಗೆ ಬರಲಿದೆ.
ಸರ್ಕಾರಿ ಮಾಂಟೆಸ್ಸರಿ ತರಗತಿಗಳು:
200 ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಸರ್ಕಾರಿ ಮಾಂಟೆಸ್ಸರಿ ತರಗತಿಗಳು ಪ್ರಾಯೋಗಿಕವಾಗಿ ಆರಂಭಗೊಂಡಿವೆ. ಮೊದಲ ಹಂತದಲ್ಲಿ 5,000 ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗುವುದು, ನಂತರ ಹಂತಹಂತವಾಗಿ ವಿಸ್ತರಿಸಲಾಗುವುದು. ‘ಅಕ್ಕಾ ಪಡೆ’ಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದೆ. ಎನ್‌ಸಿಸಿ ವಿದ್ಯಾರ್ಥಿಗಳು, ಮಹಿಳಾ ಪೇದೆಗಳು ಜನನಿಬಿಡ ಪ್ರದೇಶಗಳಲ್ಲಿ ಮತ್ತು ಮಹಿಳಾ ಕಾಲೇಜುಗಳ ಸುತ್ತಮುತ್ತ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ 109 ಸಹಾಯವಾಣಿ ಆರಂಭಿಸಲಾಗಿದೆ.
ದೇಶದಲ್ಲೇ ಮೊದಲ ಸಮೀಕ್ಷೆ
ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ ಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯನ್ನು ಕರ್ನಾಟಕದಲ್ಲಿ ನಡೆಸಲಾಗುತ್ತಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ (ತಿದ್ದುಪಡಿ) ಜಾರಿಗೆ ತರಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ, ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಸಚಿವೆ ತಿಳಿಸಿದರು.