ಮದ್ದೂರು: ಉಚಿತ ಗ್ಯಾರಂಟಿ ಯೋಜನೆಗಳು ದೊಡ್ಡ ತಪ್ಪು ಮತ್ತು ರಾಜ್ಯದ ಅಭಿವೃದ್ಧಿಗೆ ಹಾನಿಕಾರಕ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಗುರುವಾರ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಜನರು ಕೇಳಿರಲಿಲ್ಲ, ಆದರೆ ಅಧಿಕಾರಕ್ಕೆ ಬರಲು ಗುರಿಯಾಗಿಟ್ಟುಕೊಂಡು ಸರ್ಕಾರ ಈ ಯೋಜನೆಗಳನ್ನು ಘೋಷಿಸಿತು. ಈ ಯೋಜನೆಗಳಿಗೆ ಪ್ರತಿ ವರ್ಷ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ, ಇದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವ ಹಣವನ್ನು ಸರಿದೂಗಿಸಲು ಸರ್ಕಾರವು ಜನರ ಮೇಲೆ ತೆರಿಗೆ ಹೊರೆ ಹಾಕಿದೆ. ವಿದ್ಯುತ್ ಶುಲ್ಕ, ನೋಂದಣಿ ಶುಲ್ಕ, ಮದ್ಯದ ಮೇಲಿನ ತೆರಿಗೆ ಸೇರಿದಂತೆ ಹಲವು ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಜನರಿಗೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಆರ್ಥಿಕ ತೊಂದರೆಗೆ ಕಾರಣವಾಗಿದ್ದು, ಅಭಿವೃದ್ಧಿಯನ್ನು ತಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.