ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ಮುಜರಾಯಿ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷ ಹುಂಡಿ ಹಣ ಕಳವು ಘಟನೆಯಿಂದ ಭಾರೀ ವಿವಾದಕ್ಕೆ ಕಾರಣವಾಗಿದ್ದ ಈ ದೇವಸ್ಥಾನವನ್ನು 1997ರ ಕಾಯ್ದೆಯ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಎಂದು ಸರ್ಕಾರ ಘೋಷಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಳಿ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು ಘಟನೆಯ ವಿಡಿಯೋ ವೈರಲ್ ಆಗಿತ್ತು. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಟ್ರಸ್ಟಿಗಳು ಹಣವನ್ನು ಎಗರಿಸಿರುವುದನ್ನು ತೋರಿಸಿದ್ದವು. ಈ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಮುಜರಾಯಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿ, ದೇವಸ್ಥಾನವನ್ನು ತನ್ನ ವಶಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು.
ಈ ಘಟನೆಯ ಬೆನ್ನಲ್ಲೇ ಭಕ್ತರಾದ ಮೋಹನ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಟ್ರಸ್ಟಿಗಳಾದ ಹನುಮಂತಪ್ಪ, ನಾಗರಾಜ್, ಶ್ರೀನಿವಾಸ್ ರಾಮಾನುಜ, ಗೋಪಿನಾಥ್, ರಾಮಾನುಜ ಭಟ್ಟಾಚಾರ್ಯ, ಮತ್ತು ಸುರೇಶ್ ಮೇಲೆ ಎಫ್‌ಐಆರ್ ದಾಖಲಾಗಿತ್ತು.
ದೂರಿನಲ್ಲಿ, 1984ರಲ್ಲಿ ರಚನೆಯಾದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ನ ಸದಸ್ಯರು ಭಕ್ತರಿಂದ ಬಂದ ದೇಣಿಗೆ ಹಣ ಮತ್ತು ಬೆಳ್ಳಿ ಸಾಮಗ್ರಿಗಳನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸದೆ ಸ್ವಂತ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಜೊತೆಗೆ, ದೇವಸ್ಥಾನಕ್ಕೆ ಕ್ಯೂಆರ್ ಕೋಡ್ ಮೂಲಕ ಪಾವತಿಯ ಸೌಲಭ್ಯವನ್ನು ಒಡ್ಡಲಾಗಿತ್ತಾದರೂ, ಈ ಕ್ಯೂಆರ್ ಕೋಡ್‌ನ್ನು ದೇವಸ್ಥಾನದ ಖಾತೆಗೆ ಬದಲಿಗೆ ಅರ್ಚಕರ ಖಾತೆಗಳಿಗೆ ಲಿಂಕ್ ಮಾಡಿ ಹಣವನ್ನು ದುರ್ಬಳಕೆ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮೋಹನ್ ಆರೋಪಿಸಿದ್ದರು.
ಮುಜರಾಯಿ ಇಲಾಖೆಯ ಶಿಫಾರಸಿನ ಆಧಾರದ ಮೇಲೆ, ರಾಜ್ಯ ಸರ್ಕಾರವು ದೇವಸ್ಥಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಕ್ರಮವು ದೇವಸ್ಥಾನದ ಆಡಳಿತದ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಈ ಘಟನೆಯಿಂದ ದೇವಸ್ಥಾನದ ಭಕ್ತರಲ್ಲಿ ಆಘಾತ ಮೂಡಿದ್ದು, ಸರ್ಕಾರದ ಈ ಕ್ರಮವನ್ನು ಸ್ವಾಗತಿಸಲಾಗಿದೆ.