ಗದಗ: ಕಾಣೆಯಾಗಿದ್ದ ಯುವಕನೋರ್ವ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಈ ಭೀಕರ ಕೃತ್ಯವು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ವ್ಯವಸ್ಥಿತವಾಗಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ
ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಚಂದ್ರು ಕುರಿ (28) ಕೊಲೆಯಾದ ದುರ್ದೈವಿ. ಚಂದ್ರು ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದು, ಸ್ವಂತದ ಎರಡು ಕಾರುಗಳನ್ನು ಬಾಡಿಗೆಗೆ ಓಡಿಸುತ್ತಿದ್ದನು. ಕಳೆದ ಮಂಗಳವಾರ (ಮಾರ್ಚ್ 24) ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ಚಂದ್ರುಗೆ ತಡರಾತ್ರಿ ಯಾರೋ ಅಪರಿಚಿತರು ಫೋನ್ ಮಾಡಿದ್ದರು. ಫೋನ್ ಬಂದಿದೆ, ಹೋಗಿ ಬರುತ್ತೇನೆ ಎಂದು ಮನೆಯವರಿಂದ ಹೇಳಿ ಹೋದವನು ಮತ್ತೆ ಮರಳಿ ಬರಲೇ ಇಲ್ಲ.
ಮಗ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ ಶನಿವಾರ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ (Missing) ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ ಬೆನ್ನಲ್ಲೇ, ಹೊಂಬಳ ಗ್ರಾಮದ ಹೊರವಲಯದ ಸೇತುವೆಯ ಕೆಳಭಾಗದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಚಂದ್ರು ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಚಂದ್ರುವನ್ನು ಬೇರೆಡೆ ಕೊಲೆ ಮಾಡಿ, ನಂತರ ಶವವನ್ನು ಇಲ್ಲಿಗೆ ತಂದು ಸುಟ್ಟು ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತ ಚಂದ್ರುಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿತ್ತು. ಮುಂಬರುವ ಬಸವ ಜಯಂತಿಯಂದು ಮದುವೆಗೆ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಮ್ಮ ಕುಟುಂಬದ ಏಳಿಗೆಯನ್ನು ಸಹಿಸದವರೇ ಈ ಕೃತ್ಯ ಎಸಗಿದ್ದಾರೆ ಎಂದು ಮೃತನ ಪೋಷಕರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡಿದ್ದಾರೆ. ಚಂದ್ರುಗೆ ಕೊನೆಯದಾಗಿ ಕರೆ ಮಾಡಿದವರು ಯಾರು ? ಆತನ ವ್ಯವಹಾರಿಕ ಹಗೆತನವೇನಾದರೂ ಇತ್ತೇ ? ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ.
