ಗದಗ: ಪ್ರಿಯಕರನ ಬ್ಲ್ಯಾಕ್ಮೇಲ್‌ನಿಂದ ಬೇಸತ್ತು, ಮದುವೆಗೆ ಕೇವಲ ಎಂಟು ದಿನ ಬಾಕಿರುವಾಗ ದೈಹಿಕ ಶಿಕ್ಷಕಿಯೊಬ್ಬರು ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಸೈರಾಬಾನು ನದಾಫ್ (29), ಖಾಸಗಿ ಶಾಲೆಯ ದೈಹಿಕ ಶಿಕ್ಷಕಿ. ಭಾನುವಾರ, ಸೈರಾಬಾನು ಅವರ ಪೋಷಕರು ಮದುವೆ ಸಾಮಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದ ವೇಳೆ, ಡೆತ್‌ನೋಟ್ ಬರೆದಿಟ್ಟು ಅವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದರು. ಆದರೆ, ಕೆಲ ದಿನಗಳ ಹಿಂದೆ ಇವರ ಸಂಬಂಧ ಮುರಿದುಬಿತ್ತು. ಪೋಷಕರ ಒತ್ತಾಯದ ಮೇರೆಗೆ ಸೈರಾಬಾನು ಬೇರೊಬ್ಬರೊಂದಿಗೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ, ಈ ಮದುವೆ ತಯಾರಿಯನ್ನು ಕಂಡ ಮೈಲೇರಿ, ಸೈರಾಬಾನು ಅವರನ್ನು ಬೆದರಿಕೆಯಿಂದ ಕಾಡತೊಡಗಿದ. ಇಬ್ಬರ ಫೋಟೋಗಳು ಮತ್ತು ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪವಿದೆ. ಈ ಬೆದರಿಕೆಯಿಂದ ಮರ್ಯಾದೆಗೆ ಭಯಪಟ್ಟ ಸೈರಾಬಾನು ಆತ್ಮಹತ್ಯೆಗೆ ಶರಣಾದರೆಂದು ಶಂಕಿಸಲಾಗಿದೆ.
ಕೊನೆಯ ಮಗಳಿಗೆ ಭರ್ಜರಿಯಾಗಿ ಮದುವೆ ಮಾಡಿಕೊಡಲು ಪೋಷಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಶೋಕದ ಛಾಯೆ ಆವರಿಸಿದೆ.
ಸೈರಾಬಾನು ರಾಷ್ಟ್ರಮಟ್ಟದ ಕುಸ್ತಿಪಟುವಾಗಿದ್ದು, ಹಲವಾರು ಪದಕಗಳು ಮತ್ತು ಕಪ್‌ಗಳನ್ನು ಗೆದ್ದಿದ್ದರು. ಗಂಡು ಮಕ್ಕಳಿಲ್ಲದ ಕಾರಣ, ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬೆದರಿಕೆಯಿಂದ ಕಾಡಿದ ಯುವಕನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.