ಗದಗ: ಗದಗದ ಬೆಟಗೇರಿಯ ಸೆಟ್ಮೆಂಟ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ವಿಚಿತ್ರವಾದ ಲವ್ ಜಿಹಾದ್ ಆರೋಪದ ಪ್ರಕರಣ ಬೆಳಕಿಗೆ ಬಂದಿತ್ತು. ಮುಸ್ಲಿಂ ಯುವತಿಯಿಂದ ಹಿಂದೂ ಯುವಕ ವಿಶಾಲ್ ಕುಮಾರ್‌ಗೆ ಮತಾಂತರ ಒತ್ತಡ ಮಾಡಲಾಗಿದೆ ಎಂದು ದೂರಲಾಗಿತ್ತು. ಆದರೆ, ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಯುವಕನ ಪತ್ನಿಯೇ ತನ್ನ ಪತಿ ವಿಶಾಲ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾಳೆ.
ಹೌದು, ವಿಶಾಲ್ ಕುಮಾರ್ ಮತ್ತು ಮುಸ್ಲಿಂ ಯುವತಿ ತಹಸೀನ್ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ತಮ್ಮ ಸಂಬಂಧವನ್ನು ಕುಟುಂಬದಿಂದ ಗುಪ್ತವಾಗಿಟ್ಟಿದ್ದ ಈ ಜೋಡಿ, 2024ರ ನವೆಂಬರ್ 26ರಂದು ರಿಜಿಸ್ಟರ್ ಮದುವೆಯಾಗಿತ್ತು. ಆದರೆ, ಈ ವಿಷಯ ಯುವತಿಯ ಕುಟುಂಬಕ್ಕೆ ತಿಳಿದಾಗ, ಅವರು ವಿಶಾಲ್‌ನನ್ನು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಲು ಒತ್ತಾಯಿಸಿದ್ದರು. ಒತ್ತಡಕ್ಕೆ ಮಣಿದ ವಿಶಾಲ್, 2025ರ ಏಪ್ರಿಲ್ 25ರಂದು ನಿಖಾ ಸಂಪ್ರದಾಯದಂತೆ ಮದುವೆಯಾದ. ಆದರೆ, ಈ ವೇಳೆ ಆತನ ಹೆಸರನ್ನು ವಿರಾಜ್ ಸಾಬ್ ಎಂದು ಬದಲಾಯಿಸಿ, ಉರ್ದುವಿನಲ್ಲಿ ನಿಖಾ ದಾಖಲೆಯಲ್ಲಿ ನೋಂದಾಯಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ವಿಶಾಲ್‌ಗೆ ತಾನು ಬಲವಂತವಾಗಿ ಮತಾಂತರಗೊಂಡಿದ್ದೇನೆ ಎಂದು ತಿಳಿದಾಗ, ಆತ ತನ್ನ ಪತ್ನಿ ತಹಸೀನ್, ಆಕೆಯ ತಂದೆ-ತಾಯಿ ವಿರುದ್ಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ. ಆದರೆ, ಈಗ ತಹಸೀನ್ ತಾನು ಅಪ್ರಾಪ್ತೆಯಾಗಿದ್ದಾಗ ವಿಶಾಲ್ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಿ, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾಳೆ. ವಿಶಾಲ್ ಈ ಆರೋಪವನ್ನು ತಳ್ಳಿಹಾಕಿದ್ದಾನೆ. ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು, ಇಬ್ಬರಿಗೂ ನೋಟಿಸ್ ಜಾರಿ ಮಾಡಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದು, ಎರಡೂ ಕುಟುಂಬಗಳಿಗೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.