ಸೈಬರ್ ವಂಚಕರ ಬೆದರಿಕೆಗೆ ಹೆದರಿ ಪ್ರಾಣ ಬಿಟ್ಟ ವೃದ್ಧ ದಂಪತಿ

Untitled design 2025 03 28t150338.088

ಬೆಳಗಾವಿ, ಮಾ.28: ಬೆಳಗಾವಿ ಜಿಲ್ಲೆಯಲ್ಲಿ ಸೈಬರ್ ವಂಚಕರ ಕಿರುಕುಳದಿಂದಾಗಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ವೃದ್ಧ ದಂಪತಿ ಡಿಯಾಗೋ ನಜರತ್ (83) ಮತ್ತು ಪಾವಿಯಾ ನಜರತ್ (79) ಎಂಬವರು ಸೈಬರ್ ವಂಚಕರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ವಿವರ

ಜೀವಮಾನವಿಡೀ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದ ಈ ದಂಪತಿಗೆ ಕಳೆದ ಒಂದು ತಿಂಗಳಿಂದ ಸೈಬರ್ ವಂಚಕರ ಕಿರುಕುಳ ನೀಡುತ್ತಿದ್ದರು. ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು, “ನಿಮ್ಮ ನಗ್ನ ಚಿತ್ರಗಳು ನಮ್ಮ ಬಳಿ ಇದೆ, ನೀವು ಹಣ ಕೊಡದಿದ್ದರೆ ವೈರಲ್ ಮಾಡುತ್ತೇವೆ” ಎಂಬುದಾಗಿ ಬೆದರಿಕೆ ಹಾಕಿದ್ದರು. ತಮ್ಮ ಮಾನಮರ್ಯಾದೆ ಕಾಪಾಡಿಕೊಳ್ಳಲು ವೃದ್ಧ ದಂಪತಿ ತಮ್ಮ ಜೀವನಪೂರ್ತಿ ಸಂಗ್ರಹಿಸಿದ ಪಿಂಚಣಿ ಹಣವನ್ನು ವಂಚಕರ ಖಾತೆಗೆ ₹6 ಲಕ್ಷ ರುಪಾಯಿ ವರ್ಗಾವಣೆ ಮಾಡಿದ್ದರು.

ಆದರೆ, ಹಣ ಪಡೆದುಕೊಂಡ ಬಳಿಕವೂ ವಂಚಕರು ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಮತ್ತಷ್ಟು ಹಣಕ್ಕಾಗಿ ನಿರಂತರವಾಗಿ ಕರೆ ಮಾಡಿ ಬೆದರಿಸುತ್ತಿದ್ದರು. ಸೈಬರ್ ಖದೀಮರ ಕಿರುಕುಳದಿಂದ ಮಾನಸಿಕವಾಗಿ ಬೇಸತ್ತ ಪಾವಿಯಾ ನಜರತ್ ಮಂಗಳವಾರ ರಾತ್ರಿ ನಿದ್ರಾ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನಿಂದ ಮನನೊಂದ ಗಂಡ ಡಿಯಾಗೋ ನಜರತ್ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು, ಚಾಕುವಿನಿಂದ ತನ್ನದೇ ಕುತ್ತಿಗೆ ಕೊಯ್ದುಕೊಂಡಿದ್ದಾರೆ.

ವೃದ್ಧ ದಂಪತಿಗೆ ಪರಿಚಿತರಾಗಿದ್ದ ಸ್ಥಳೀಯ ಸ್ವಸಹಾಯ ಸಂಘದ ಮಹಿಳೆ ಅವರು ದಿನವೂ ಮನೆಗೆ ಭೇಟಿ ನೀಡುತ್ತಿದ್ದವಳು. ಆಕೆ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಆಕೆ ಕಿಟಕಿಯಿಂದ ನೋಡಿದಾಗ ಈ ದೃಶ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯ ನಂದಗಡ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವೃದ್ಧ ದಂಪತಿಗಳು ಬರೆದ ಡೆತ್ ನೋಟ್‌ನಲ್ಲಿ ತಮ್ಮ ಸಾವಿಗೆ ಸೈಬರ್ ವಂಚಕರೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೈಬರ್ ವಂಚಕರ ಪತ್ತೆಗಾಗಿ ತನಿಖೆ ಪ್ರಾರಂಭಿಸಿದ್ದಾರೆ.

Exit mobile version