ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಸದ್ಯ ಖಾಲಿಯಿಲ್ಲ, ಆದ್ದರಿಂದ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿರುವುದರಲ್ಲಿ ತಪ್ಪೇನಿದೆ? ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ, ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಗುರುವಾರ, ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಚರ್ಚೆ ಮತ್ತು ಸಿದ್ದರಾಮಯ್ಯನವರ ಐದು ವರ್ಷದ ಮುಖ್ಯಮಂತ್ರಿತ್ವದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು.
“ಸಿದ್ದರಾಮಯ್ಯನವರು ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮುಖ್ಯಮಂತ್ರಿಯಾಗಿರುವವರು ತಮ್ಮ ಅವಧಿಯನ್ನು ಮುಂದುವರಿಸುವುದಾಗಿ ಹೇಳಿದರೆ ಅದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ತೀರ್ಮಾನದಂತೆ ಅವರು ಸಿಎಂ ಆಗಿದ್ದಾರೆ. ಸರ್ಕಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂಥ ಚರ್ಚೆಯ ಅಗತ್ಯವಿಲ್ಲ,” ಎಂದು ಸುರೇಶ್ ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಆಯ್ಕೆಯಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, “ಶಿವಕುಮಾರ್ ಅವರು ಮೊದಲಿನಿಂದಲೂ ಪಕ್ಷದ ಶಿಸ್ತಿಗೆ ಬದ್ಧರಾಗಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿಕೊಂಡು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆ. ಅವರು ಈಗಲೂ ಇದೇ ಮಾತನ್ನು ಹೇಳಿದ್ದಾರೆ ಮತ್ತು ಮುಂದೆಯೂ ಇದನ್ನೇ ಹೇಳುತ್ತಾರೆ,” ಎಂದರು.
ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಆಕಾಂಕ್ಷೆ ಬಗ್ಗೆ ಮಾತನಾಡಿದ ಸುರೇಶ್, “ಶಿವಕುಮಾರ್ ಸಿಎಂ ಆಗಬೇಕೆಂಬ ಭರವಸೆ ಇಂದಿಗೂ ಇದೆ, ಮುಂದೆಯೂ ಇರುತ್ತದೆ. ನಂಬಿಕೆ ಇಲ್ಲದಿದ್ದರೆ ಜೀವನ ನಡೆಸಲು ಕಷ್ಟವಾಗುತ್ತದೆ. ಶಿವಕುಮಾರ್ ಅವರು ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ರಾಜ್ಯದ ಕೆಲವು ಭಾಗದ ಜನರು ಅವರಿಗೆ ಸಿಎಂ ಸ್ಥಾನದ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಆದರೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ,” ಎಂದು ಹೇಳಿದರು.
ಶಿವಕುಮಾರ್‌ರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆಯೇ ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ ಒಂದಲ್ಲ ಒಂದು ದಿನ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಆದರೆ, ಸಿಎಂ ಆಗುವ ವಿಚಾರವನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ,” ಎಂದು ಒತ್ತಿ ಹೇಳಿದರು.
ಗೌರವ, ಅಸಹಾಯಕತೆಯಲ್ಲ:
ಎರಡೂವರೆ ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುವ ನಿರೀಕ್ಷೆಯ ಬಗ್ಗೆ ಕೇಳಿದಾಗ, “ಶಿವಕುಮಾರ್‌ರ ಹೇಳಿಕೆ ಅಸಹಾಯಕತೆಯಲ್ಲ, ಬದಲಿಗೆ ಪಕ್ಷಕ್ಕೆ ನೀಡುವ ಗೌರವ. ಜವಾಬ್ದಾರಿಯುತ ಸ್ಥಾನದಲ್ಲಿದ್ದಾಗ ಪಕ್ಷದ ತೀರ್ಮಾನಕ್ಕೆ ಒಪ್ಪಿಕೊಳ್ಳುವುದು ಅವರ ಕರ್ತವ್ಯ. ಅವರು ಆ ಗೌರವವನ್ನು ತೋರಿದ್ದಾರೆ,” ಎಂದು ಡಿಕೆ ಸುರೇಶ್ ಸ್ಪಷ್ಟಪಡಿಸಿದರು.
ಕಾರ್ಯಕರ್ತರಿಗೆ ಈ ಬೆಳವಣಿಗೆಯಿಂದ ಯಾವ ಸಂದೇಶ ಸಿಗುತ್ತದೆ ಎಂಬ ಪ್ರಶ್ನೆಗೆ, “ಕಾಂಗ್ರೆಸ್ ಪಕ್ಷಕ್ಕೆ ಜನರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳು ಎಲ್ಲರೂ ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡಬೇಕು. ಪಕ್ಷ, ಕಾರ್ಯಕರ್ತರು ಮತ್ತು ಜನರ ಒಳಿತಿಗಾಗಿ ಒಗ್ಗಟ್ಟಾಗಿ ಮುಂದುವರಿಯಬೇಕು,” ಎಂದು ಡಿಕೆ ಸುರೇಶ್ ಕರೆ ನೀಡಿದರು.
ಸಿದ್ದರಾಮಯ್ಯ-ಶಿವಕುಮಾರ್ ಸಂಬಂಧ
ಸಿದ್ದರಾಮಯ್ಯನವರು “ಈ ಸರ್ಕಾರ ಬಂಡೆಯಂತೆ ಗಟ್ಟಿಯಾಗಿರುತ್ತದೆ” ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, “ಶಿವಕುಮಾರ್ ಅವರು ಈ ಹೇಳಿಕೆಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಹಿಂದೆಯೂ ಒಗ್ಗಟ್ಟಾಗಿದ್ದರು, ಈಗಲೂ ಒಗ್ಗಟ್ಟಾಗಿದ್ದಾರೆ, ಮುಂದೆಯೂ ಒಗ್ಗಟ್ಟಾಗಿರುತ್ತಾರೆ,” ಎಂದು ಒತ್ತಿ ಹೇಳಿದರು.