ಕಾಲ್ತುಳಿತ ಪ್ರಕರಣ: ರಾಜ್ಯ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ, ಆರ್. ಅಶೋಕ್ ಕಿಡಿ

ಹೈಕೋರ್ಟ್‌ನ ಸ್ವಯಂ ಪ್ರೇರಣೆ ಪ್ರಕರಣ ದಾಖಲು: ಮೂರು ದಿನದ ಅಧಿವೇಶನಕ್ಕೆ ಆರ್. ಅಶೋಕ್ ಆಗ್ರಹ!

Untitled design (68)

ಬೆಂಗಳೂರು: ಕಾಲ್ತುಳಿತ ದುರಂತ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಾಗಿರುವುದು ರಾಜ್ಯ ಸರ್ಕಾರದ ಮೇಲಿನ ಅಪನಂಬಿಕೆಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, “ಕಾಲ್ತುಳಿತ ಘಟನೆಯಲ್ಲಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲದಿದ್ದರೆ, ಸೂಕ್ತ ತನಿಖೆ ನಡೆಸಬೇಕಿತ್ತು. ಆದರೆ, ಹೈಕೋರ್ಟ್‌ನ ಸ್ವಯಂ ಪ್ರೇರಣೆಯ ಪ್ರಕರಣವೇ ಸರ್ಕಾರದ ವೈಫಲ್ಯವನ್ನು ಸಾಬೀತು ಮಾಡುತ್ತದೆ. ಸರ್ಕಾರಕ್ಕೆ ಕೋರ್ಟ್‌ನ ವಿಶ್ವಾಸವಿಲ್ಲ ಎಂದರ್ಥ. 11 ಜನರ ಸಾವಿಗೆ ಕಾರಣವಾದ ಘಟನೆಯ ತನಿಖೆಗೆ ಮೃತರ ಕುಟುಂಬದವರಿಂದಲೇ ಮಾಹಿತಿ ಸಂಗ್ರಹಿಸಬಹುದಿತ್ತು. ಆದರೆ, ಜಿಲ್ಲಾಧಿಕಾರಿ, ನಿವೃತ್ತ ನ್ಯಾಯಾಧೀಶರು, ಎಸ್‌ಐಟಿ ಎಂದು ಬದಲಾಯಿಸುತ್ತಿರುವ ತನಿಖೆಯಿಂದ ಯಾವುದೇ ಖಚಿತತೆ ಕಾಣುತ್ತಿಲ್ಲ,” ಎಂದು ಆರ್. ಅಶೋಕ್ ಹೇಳಿದರು.

ಮುಂದುವರಿದು, “ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕ್ರಿಕೆಟಿಗರೊಂದಿಗೆ ಫೋಟೋ ಶೂಟ್‌ನಲ್ಲಿ ತೊಡಗಿದ್ದರಿಂದಲೇ ಈ ದುರಂತ ಸಂಭವಿಸಿದೆ. ಸರ್ಕಾರವೇ ಎರಡು ಲಕ್ಷ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿತು. ಸೂಕ್ತ ಪೊಲೀಸ್ ಭದ್ರತೆ ಒದಗಿಸಿದ್ದರೆ ಈ ಘಟನೆ ತಪ್ಪಬಹುದಿತ್ತು. ಬಿಜೆಪಿಯ ಪ್ರತಿಭಟನೆಗೆ ನೂರಾರು ಪೊಲೀಸರನ್ನು ನಿಯೋಜಿಸಿದ್ದ ಸರ್ಕಾರ, ಈ ಸಂದರ್ಭದಲ್ಲಿ ಭದ್ರತೆಯಲ್ಲಿ ವಿಫಲವಾಗಿದೆ,” ಎಂದು ಆರ್. ಅಶೋಕ್ ಟೀಕಿಸಿದರು.

“ಸರ್ಕಾರ ತನ್ನ ತಪ್ಪಿಲ್ಲ ಎಂದಾದರೆ, ಮೂರು ದಿನದ ಅಧಿವೇಶನ ಕರೆದು ಈ ಘಟನೆಗೆ ಯಾರು ಜವಾಬ್ದಾರ ಎಂಬುದನ್ನು ಸ್ಪಷ್ಟಪಡಿಸಲಿ. ಈ ಸರ್ಕಾರದ ಆಡಳಿತ ಅಕ್ಟೋಬರ್‌ನಲ್ಲೇ ಕೊನೆಗೊಳ್ಳಲಿದೆ. ಕಾಂಗ್ರೆಸ್‌ನ ಶಾಸಕರೆಲ್ಲರೂ ‘ನಾನೇ ಮುಖ್ಯಮಂತ್ರಿ’ ಎಂದು ಹೇಳಿಕೊಳ್ಳುತ್ತಿದ್ದಾರೆ. 2028ರಲ್ಲಿ ಇವರು ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯ. ಡಿ.ಕೆ. ಶಿವಕುಮಾರ್ ಕೂಡ ತೀವ್ರ ಚಿಂತೆಯಲ್ಲಿದ್ದಾರೆ,” ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು.

Exit mobile version