ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ಘೋರ ದುರಂತ ನಡೆದಿದೆ. ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯಿಂದ ಗ್ರಾಮದಲ್ಲಿ ಆಘಾತ ಮತ್ತು ಆಕ್ರಂದನ ಮನೆಮಾಡಿದ್ದು, ಸಂಬಂಧಿಕರು, ನೆರೆಹೊರೆಯವರು ನುಂಗಲಾರದ ಸ್ಥಿತಿಯಲ್ಲಿದ್ದಾರೆ.
ಅಜ್ಜ ವಿಠ್ಠಲರಾವ್ ಶಿಂಧೆ (85 ವರ್ಷ) ಮತ್ತು ತಂದೆ ನಾರಾಯಣ ಶಿಂಧೆ (42 ವರ್ಷ), ಇಬ್ಬರು ಚಿಕ್ಕ ಮಕ್ಕಳು ಶಿವರಾಜ (12 ವರ್ಷ), ಶ್ರೀನಿಧಿ (10 ವರ್ಷ) ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಗ್ರಾಮದ ಹೊರಗಿನ ಹಳೇ ಬಾವಿಯ ಬಳಿ ಇವರ ನಾಲ್ವರ ಚಪ್ಪಲಿಗಳು ದಂಡೆಯ ಮೇಲೆ ಸಾಲು ಸಾಲಾಗಿ ಇಡಲಾಗಿದ್ದವು. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಬಾವಿಯಲ್ಲಿ ನಾಲ್ವರ ದೇಹಗಳು ಕಂಡು ಆಘಾತಕ್ಕೊಳಗಾದರು. ತಕ್ಷಣ ಸ್ಥಳಕ್ಕೆ ಧಾರವಾಡ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಧಾವಿಸಿ ದೇಹಗಳನ್ನು ಹೊರತೆಗೆದಿದ್ದಾರೆ.
ಆತ್ಮಹತ್ಯೆಗೆ ಕಾರಣ? ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಸಮಸ್ಯೆಗಳೇ ಈ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳೀಯರ ಪ್ರಕಾರ ಕುಟುಂಬದಲ್ಲಿ ಕೆಲವು ದಿನಗಳಿಂದ ಒತ್ತಡ ಮತ್ತು ಜಗಳಗಳಿದ್ದವು ಎನ್ನಲಾಗುತ್ತಿದೆ. ಪೊಲೀಸರು ಸ್ಥಳ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಎಲ್ಲೆಡೆ ದುಃಖ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.





